ಬೆಂಗಳೂರು : ಕೃಷಿ ಮಾರಾಟ, ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ಮತ್ತು ಬೆಂಗಳೂರು ಜಲಮಂಡಳಿಯಲ್ಲಿ ಖಾಲಿ ಇರುವ ವಿವಿಧ ರೀತಿಯ ಒಟ್ಟು 37 ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಜೂನ್ 4 ಕೊನೆ ದಿನ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಪರಿಶಿಷ್ಟ ಜಾತಿಯ ಒಳ ಮೀಸಲಾತಿ ನಿಗದಿ ನಂತರ ಪರೀಕ್ಷೆ ನಡೆಸದೇ ಇರುವ ನೇಮಕಾತಿ ಪ್ರಕ್ರಿಯೆಯನ್ನು ತಡೆ ಹಿಡಿದು, ಮರು ಅಧಿಸೂಚನೆ ಹೊರಡಿಸಲು ಸರ್ಕಾರ ಸೂಚಿಸಿತ್ತು. ಆ ಪ್ರಕಾರ ಸಂಬಂಧಪಟ್ಟ ಇಲಾಖೆಗಳಿಂದ ಒಳ ಮೀಸಲಾತಿ ಅಳವಡಿಸಿಕೊಂಡು ಮರು ಅಧಿಸೂಚನೆ ಹೊರಡಿಸಿದ ನಂತರ ಅರ್ಜಿ ಕರೆದಿದ್ದು, ಈ ಹಿಂದೆ ಅರ್ಜಿ ಸಲ್ಲಿಸಿದವರು ಪುನಃ ಅರ್ಜಿ ಸಲ್ಲಿಸುವ ಅಗತ್ಯ ಇಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪರಿಶಿಷ್ಟ ಜಾತಿಯ ಎ, ಬಿ ಮತ್ತು ಸಿ ವರ್ಗ ಗಳ ಆರ್ ಡಿ ಸಂಖ್ಯೆ ದಾಖಲು ಮಾಡದವರು ಕೂಡ ಈ ಹಿಂದಿನ ಅರ್ಜಿಯಲ್ಲೇ ಎಡಿಟ್ ಮಾಡಿ, ದಾಖಲಿಸಬಹುದು ಎಂದು ಅವರು ವಿವರಿಸಿದ್ದಾರೆ. ಹೊಸದಾಗಿ ಅರ್ಜಿ ಸಲ್ಲಿಸುವವರು ಕೂಡ ಅರ್ಜಿ ಸಲ್ಲಿಸಬಹುದು. ಆದರೆ ಈ ಹುದ್ದೆಗಳಿಗೆ ಈ ಮೊದಲು ಅರ್ಜಿ ಸಲ್ಲಿಸಿದ್ದು, ಪುನಃ ಸಲ್ಲಿಸುವ ಅಗತ್ಯ ಇರುವುದಿಲ್ಲ ಎಂದು ಅವರು ತಿಳಿಸಿದರು.








