ಶಿವಮೊಗ್ಗ: ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ನಡೆದ ಸರಣಿ ದುರಂತಗಳ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಅರಣ್ಯ ಇಲಾಖೆ, ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯದ ಪ್ರಮುಖ ಆನೆ ಬಿಡಾರಗಳಿಗೆ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತಿದ್ದು, ಇದೀಗ ಪ್ರಸಿದ್ಧ ಶಿವಮೊಗ್ಗದ ಗಾಜನೂರು ಸಮೀಪದ ಸಕ್ರೆಬೈಲು ಆನೆ ಬಿಡಾರಕ್ಕೂ ಬೀಗ ಬೀಳುವ ಸರದಿ ಬಂದಿದೆ. ನಾಳೆಯಿಂದಲೇ (ಮೇ 22) ಅನ್ವಯವಾಗುವಂತೆ ಸಕ್ರೆಬೈಲು ಆನೆ ಬಿಡಾರವನ್ನು ಬಂದ್ ಮಾಡಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ಸೂಕ್ತ ಪ್ರಮಾಣಿತ ಕಾರ್ಯವಿಧಾನ (SOP) ಇಲ್ಲದ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ಹೊಸ ಗೈಡ್ಲೈನ್ಸ್ ಸಿದ್ಧವಾಗುವವರೆಗೂ ಅಂದರೆ ಅನಿರ್ದಿಷ್ಟ ಅವಧಿಯವರೆಗೆ ಸಕ್ರೆಬೈಲು ಆನೆ ಬಿಡಾರ ಸಾರ್ವಜನಿಕರಿಗೆ ಲಭ್ಯವಿರುವುದಿಲ್ಲ ಎಂದು ತಿಳಿದುಬಂದಿದೆ. ಆನೆಗಳ ವರ್ತನೆ ಹಾಗೂ ಪ್ರವಾಸಿಗರ ಸುರಕ್ಷತೆಗೆ ಸಂಬಂಧಿಸಿದಂತೆ ಸೂಕ್ತ ನಿಯಮಾವಳಿಗಳು ಜಾರಿಗೆ ಬರುವವರೆಗೂ ಈ ನಿರ್ಬಂಧ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ.
ದುಬಾರೆ ದುರಂತವೇ ಕಾರಣ!
ಇತ್ತೀಚೆಗೆ ಕೊಡಗು ಜಿಲ್ಲೆಯ ದುಬಾರೆ ಆನೆ ಶಿಬಿರದಲ್ಲಿ ‘ಕಂಜನ್’ ಹಾಗೂ ‘ಮಾರ್ತಾಂಡ’ ಎಂಬ ಸಾಕಾನೆಗಳ ನಡುವೆ ಭೀಕರ ಕಾದಾಟ ನಡೆದಿತ್ತು. ಈ ವೇಳೆ ಆನೆಗಳ ತುಳಿತಕ್ಕೆ ಸಿಲುಕಿ ಓರ್ವ ಮಹಿಳಾ ಪ್ರವಾಸಿಗರು ದುರದೃಷ್ಟವಶಾತ್ ಸಾವನ್ನಪ್ಪಿದ್ದರು. ಅಷ್ಟೇ ಅಲ್ಲದೆ, ಈ ಕಾದಾಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಕೂಡ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿತ್ತು. ಈ ಕರುಣಾಜನಕ ಹಾಗೂ ಭೀಕರ ಘಟನೆಯು ಅರಣ್ಯ ಇಲಾಖೆಯನ್ನು ತೀವ್ರ ಮುಜುಗರಕ್ಕೆ ಈಡುಮಾಡಿತ್ತಲ್ಲದೆ, ಆನೆ ಬಿಡಾರಗಳಲ್ಲಿನ ಪ್ರವಾಸಿಗರ ಸುರಕ್ಷತೆಯ ಬಗ್ಗೆ ದೊಡ್ಡ ಪ್ರಶ್ನೆಯನ್ನು ಮೂಡಿಸಿತ್ತು. ಈ ದುರ್ಘಟನೆ ನಡೆದ ತಕ್ಷಣವೇ ದುಬಾರೆ ಶಿಬಿರಕ್ಕೆ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು.
ಪನ್ಸೋಲಿ ಬಿಡಾರಕ್ಕೂ ನಿರ್ಬಂಧದ ಬಿಸಿ
ದುಬಾರೆ ಘಟನೆಯ ಅಲರ್ಟ್ ಎಫೆಕ್ಟ್ ಕೇವಲ ಶಿವಮೊಗ್ಗಕ್ಕೆ ಮಾತ್ರ ಸೀಮಿತವಾಗಿಲ್ಲ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಪ್ರಸಿದ್ಧ ‘ಪನ್ಸೋಲಿ ಆನೆ ಬಿಡಾರ’ಕ್ಕೂ ಈಗ ಸಾರ್ವಜನಿಕರ ಪ್ರವೇಶವನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ. ಮುಂದಿನ ಆದೇಶದವರೆಗೂ ಪ್ರವಾಸಿಗರು ಆನೆಗಳನ್ನು ವೀಕ್ಷಿಸಲು ಅವಕಾಶ ಇರುವುದಿಲ್ಲ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.
ಪ್ರಸ್ತುತ ಪನ್ಸೋಲಿ ಬಿಡಾರದಲ್ಲಿ ಒಟ್ಟು 5 ಆನೆಗಳಿದ್ದು, ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ ಸಾರ್ವಜನಿಕರಿಗೆ ಇವುಗಳ ವೀಕ್ಷಣೆಗೆ ಮುಕ್ತ ಅವಕಾಶವಿತ್ತು. ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿಗರ ಮೆಚ್ಚಿನ ತಾಣವಾಗಿ ಗುರುತಿಸಿಕೊಂಡಿದ್ದ ಈ ಪನ್ಸೋಲಿ ಬಿಡಾರವನ್ನು ಇಲಾಖೆಯು ಆನೆ ಚಿಕಿತ್ಸಾ ಕೇಂದ್ರ ಹಾಗೂ ತರಬೇತಿ ಕೇಂದ್ರವಾಗಿ ಮಾರ್ಪಡಿಸಿತ್ತು. ಆದರೆ ದುಬಾರೆ ಘಟನೆಯಿಂದ ಎಚ್ಚೆತ್ತುಕೊಂಡಿರುವ ಇಲಾಖೆ, ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧವಿಲ್ಲದ ಕಾರಣ ಈ ಮುನ್ನೆಚ್ಚರಿಕೆ ಕ್ರಮವಾಗಿ ಆದೇಶ ಹೊರಡಿಸಿದೆ.








