ಉತ್ತರಕನ್ನಡ :ಕೊಡಗು ಜಿಲ್ಲೆಯ ದುಬಾರೆ ಆನೆ ಶಿಬಿರದಲ್ಲಿ ನಡೆದ ಆನೆಗಳ ಕಾದಾಟ ಮತ್ತು ಸಾವು-ನೋವಿನ ದುರ್ಘಟನೆಯ ಬೆನ್ನಲ್ಲೇ, ಅರಣ್ಯ ಇಲಾಖೆಯು ಮುಂಜಾಗ್ರತಾ ಕ್ರಮವಾಗಿ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಪನ್ಸೋಲಿ ಆನೆ ಬಿಡಾರಕ್ಕೂ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಆದೇಶ ಹೊರಡಿಸಿದೆ. ಮುಂದಿನ ಆದೇಶದವರೆಗೆ ಪ್ರವಾಸಿಗರಿಗೆ ಆನೆಗಳ ವೀಕ್ಷಣೆಗೆ ಅವಕಾಶ ಇರುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಇತ್ತೀಚೆಗೆ ಕೊಡಗಿನ ಪ್ರಸಿದ್ಧ ದುಬಾರೆ ಆನೆ ಶಿಬಿರದಲ್ಲಿ ‘ಕಂಜನ್’ ಮತ್ತು ‘ಮಾರ್ತಾಂಡ’ ಎಂಬ ಆನೆಗಳ ನಡುವೆ ಭೀಕರ ಕಾದಾಟ ನಡೆದಿತ್ತು. ಈ ವೇಳೆ ದುರದೃಷ್ಟವಶಾತ್ ಓರ್ವ ಮಹಿಳೆ ಜೀವ ಕಳೆದುಕೊಂಡಿದ್ದರು. ಅಲ್ಲದೆ, ಕಾದಾಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಾರ್ತಾಂಡ ಆನೆಯೂ ಸಹ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿತ್ತು. ಈ ಘಟನೆಯ ತೀವ್ರತೆಯನ್ನು ಪರಿಗಣಿಸಿ ಮೊದಲು ದುಬಾರೆ ಶಿಬಿರಕ್ಕೆ ಸಾರ್ವಜನಿಕರ ಪ್ರವೇಶವನ್ನು ರದ್ದುಗೊಳಿಸಲಾಗಿತ್ತು.
ದುಬಾರೆಯಲ್ಲಿ ನಡೆದ ಅನಿರೀಕ್ಷಿತ ದುರಂತದಿಂದ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ, ರಾಜ್ಯದ ಇತರ ಆನೆ ಬಿಡಾರಗಳಲ್ಲೂ ಮುನ್ನೆಚ್ಚರಿಕೆ ವಹಿಸಲು ನಿರ್ಧರಿಸಿದೆ. ಜೋಯಿಡಾ ತಾಲೂಕಿನ ಪನ್ಸೋಲಿ ಆನೆ ಬಿಡಾರವು ಸದ್ಯ ಆನೆಗಳ ಚಿಕಿತ್ಸಾ ಕೇಂದ್ರ ಮತ್ತು ತರಬೇತಿ ಕೇಂದ್ರವಾಗಿ ಮಾರ್ಪಟ್ಟಿದೆ. ಬಿಡಾರದಲ್ಲಿರುವ ಆನೆಗಳ ವರ್ತನೆ ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಪ್ರವಾಸಿಗರ ಭೇಟಿಗೆ ಬ್ರೇಕ್ ಹಾಕಲಾಗಿದೆ.
ಪ್ರಸ್ತುತ ಪನ್ಸೋಲಿ ಆನೆ ಬಿಡಾರದಲ್ಲಿ ಒಟ್ಟು 5 ಆನೆಗಳಿದ್ದು, ಇವುಗಳ ಆರೈಕೆ ಮಾಡಲಾಗುತ್ತಿದೆ. ಇಲ್ಲಿ ನಿತ್ಯ ಬೆಳಗ್ಗೆ ಮತ್ತು ಸಂಜೆ ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಆನೆಗಳನ್ನು ಹತ್ತಿರದಿಂದ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಪನ್ಸೋಲಿ ಬಿಡಾರವು ಪ್ರವಾಸಿಗರ ನೆಚ್ಚಿನ ತಾಣವಾಗಿ ಗುರುತಿಸಿಕೊಂಡಿತ್ತು.
ಆದರೆ, ಈಗ ಅರಣ್ಯ ಇಲಾಖೆಯು ತುರ್ತು ಮುಂಜಾಗ್ರತಾ ಆದೇಶ ಹೊರಡಿಸಿರುವುದರಿಂದ ಪನ್ಸೋಲಿ ಬಿಡಾರಕ್ಕೆ ಪ್ರವಾಸಿಗರ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಪರಿಸ್ಥಿತಿಯನ್ನು ಅವಲೋಕಿಸಿ, ಆನೆಗಳ ಸುರಕ್ಷತೆ ಹಾಗೂ ಸಾರ್ವಜನಿಕರ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಂಡ ಬಳಿಕವಷ್ಟೇ ಮುಂದಿನ ದಿನಗಳಲ್ಲಿ ಪ್ರವೇಶಾವಕಾಶ ನೀಡುವ ಬಗ್ಗೆ ಇಲಾಖೆ ತೀರ್ಮಾನಿಸಲಿದೆ.








