ಕೊಪ್ಪಳ : ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದ್ದು, ಹೃದಯಾಘಾತದಿಂದ 25 ವರ್ಷದ ಯುವ ವಕೀಲ ಸಾವನಪ್ಪಿದ್ದಾನೆ. ಗಂಗಾವತಿ ನ್ಯಾಯಾಲಯದ ಆವರಣದಲ್ಲಿ 25 ವರ್ಷದ ಯುವ ವಕೀಲರೊಬ್ಬರು ಹೃದಯಾಘಾತದಿಂದ ದಿಢೀರ್ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಸಂಭವಿಸಿದೆ.
ಮೃತರನ್ನು ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಚಿಕ್ಕಮಾದಿನಾಳ ಗ್ರಾಮದ ನಿವಾಸಿ ಕನಕೇಶ್ (25) ಎಂದು ಗುರುತಿಸಲಾಗಿದೆ. ವಕೀಲ ವೃತ್ತಿ ಆರಂಭಿಸಿ ಭವಿಷ್ಯದ ಬಗ್ಗೆ ಹತ್ತಾರು ಕನಸುಗಳನ್ನು ಕಂಡಿದ್ದ ಯುವಕ ಹೀಗೆ ಅರ್ಧಕ್ಕೇ ಇಹಲೋಕ ತ್ಯಜಿಸಿರುವುದು ಅವರ ಕುಟುಂಬಸ್ಥರು ಹಾಗೂ ವಕೀಲರ ವಲಯದಲ್ಲಿ ತೀವ್ರ ಆಘಾತ ಮೂಡಿಸಿದೆ.
ಯಾರೂ ಊಹಿಸದ ರೀತಿಯಲ್ಲಿ ಈ ದುರಂತ ಸಂಭವಿಸಿದೆ. ಎಂದಿನಂತೆ ಕನಕೇಶ್ ಅವರು ಗಂಗಾವತಿ ನ್ಯಾಯಾಲಯದ ಕಲಾಪಗಳಲ್ಲಿ ಪಾಲ್ಗೊಳ್ಳಲು ಕೋರ್ಟ್ ಆವರಣಕ್ಕೆ ಆಗಮಿಸಿದ್ದರು. ಆದರೆ, ನ್ಯಾಯಾಲಯದ ಆವರಣದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಅವರಿಗೆ ಎದೆನೋವು ಕಾಣಿಸಿಕೊಂಡು, ಕ್ಷಣಾರ್ಧದಲ್ಲಿ ಪ್ರಜ್ಞೆ ತಪ್ಪಿ ಕೆಳಗೆ ಕುಸಿದು ಬಿದ್ದಿದ್ದಾರೆ.
ಕನಕೇಶ್ ಅವರು ಕೋರ್ಟ್ ಆವರಣದಲ್ಲೇ ದಿಢೀರ್ ಕುಸಿದು ಬೀಳುತ್ತಿದ್ದಂತೆ ತಲ್ಲಣಗೊಂಡ ಅಲ್ಲಿದ್ದ ಸಹೋದ್ಯೋಗಿ ವಕೀಲರು ಹಾಗೂ ಸಾರ್ವಜನಿಕರು ತಕ್ಷಣವೇ ಅವರ ನೆರವಿಗೆ ಧಾವಿಸಿದ್ದಾರೆ. ತಡಮಾಡದೆ ಅವರನ್ನು ಪ್ರಥಮ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕೊಂಡೊಯ್ಯಲು ವ್ಯವಸ್ಥೆ ಮಾಡಲಾಯಿತಾದರೂ, ವಿಧಿಯ ಆಟ ಬೇರೆಯೇ ಆಗಿತ್ತು. ಆಸ್ಪತ್ರೆಗೆ ತಲುಪುವ ಮಾರ್ಗ ಮಧ್ಯದಲ್ಲೇ ಕನಕೇಶ್ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.








