ಪ್ರಧಾನಿ ಮೋದಿಯವರ 5 ದೇಶಗಳ ಜಾಗತಿಕ ಪ್ರವಾಸದ ನಡುವೆ ಮೂಡಿಬಂದಿರುವ ಹೊಸ ವಾಕ್ಸಮರದಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು, ಮೋದಿ ತಮಗೆ ‘ಮೆಲೋಡಿ’ ಟೋಫಿ ಪ್ಯಾಕೆಟ್ ಅನ್ನು ಉಡುಗೊರೆಯಾಗಿ ನೀಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ ಬೆನ್ನಲ್ಲೇ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರ ಈ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಷಯ ಏನೆಂದರೆ, ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಪಾರ್ಲೆ ಸಂಸ್ಥೆಯ ‘ಮೆಲೋಡಿ’ ಚಾಕೊಲೇಟ್ ಪ್ಯಾಕೆಟ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಇದರ ವಿಡಿಯೋ ದೇಶಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಇಟಲಿ ಪ್ರಧಾನಿಗೆ ಮೋದಿ ನೀಡಿದ ಈ ಉಡುಗೊರೆಯ ಕುರಿತು ರಾಹುಲ್ ಗಾಂಧಿ ಹೇಳಿದ್ದೇನು ಎಂಬ ಸಂಪೂರ್ಣ ವಿವರ ಇಲ್ಲಿದೆ.
ದೇಶದಲ್ಲಿ ಭೀಕರ ಆರ್ಥಿಕ ಬಿರುಗಾಳಿ ಬೀಸುತ್ತಿದೆ, ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿಯಲ್ಲಿ ಚಾಕೊಲೇಟ್ ಹಂಚುವುದರಲ್ಲಿ ಬ್ಯುಸಿಯಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ.
ತಮ್ಮ ಲೋಕಸಭಾ ಕ್ಷೇತ್ರವಾದ ರಾಯ್ಬರೇಲಿಗೆ ಭೇಟಿ ನೀಡಿರುವ ರಾಹುಲ್ ಗಾಂಧಿ, ‘X’ (ಟ್ವಿಟರ್) ನಲ್ಲಿ, “ಇದು ನಾಯಕತ್ವವಲ್ಲ, ಇದೊಂದು ಗಿಮಿಕ್ ” ಎಂದು ಬರೆದುಕೊಂಡಿದ್ದಾರೆ.
’ಪ್ರಧಾನಿ ನಗುತ್ತಾ ರೀಲ್ಸ್ ಮಾಡುತ್ತಿದ್ದಾರೆ’ ಎಂದ ರಾಹುಲ್ ಗಾಂಧಿ
ದೇಶದ ರೈತರು, ಕಾರ್ಮಿಕರು, ವ್ಯಾಪಾರಿಗಳು ಮತ್ತು ಇತರರು ಕಣ್ಣೀರು ಹಾಕುತ್ತಿರುವ ಸಮಯದಲ್ಲಿ, ಪ್ರಧಾನಿಯವರು ನಗುತ್ತಾ ರೀಲ್ಸ್ ಮಾಡುತ್ತಿದ್ದಾರೆ ಮತ್ತು ಬಿಜೆಪಿಯವರು ಅದಕ್ಕೆ ಚಪ್ಪಾಳೆ ತಟ್ಟುತ್ತಿದ್ದಾರೆ ಎಂದು ಮಾಜಿ ಕಾಂಗ್ರೆಸ್ ಅಧ್ಯಕ್ಷರು ತಮ್ಮ ಹಿಂದಿ ಪೋಸ್ಟ್ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.








