ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ದೇಶದಲ್ಲಿ ಭೀಕರ “ಆರ್ಥಿಕ ಬಿರುಗಾಳಿ” ಎದ್ದಿದೆ; ಇತ್ತ ರೈತರು, ಯುವಕರು, ಮಹಿಳೆಯರು, ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳು “ಕಣ್ಣೀರು ಹಾಕುತ್ತಿದ್ದರೆ”, ಪ್ರಧಾನಿಯವರು ನಗುತ್ತಾ ರೀಲ್ಸ್ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಪ್ರಧಾನಿ ಮೋದಿ ಅವರು ಇತ್ತೀಚೆಗೆ ಇಟಲಿ ಪ್ರವಾಸದ ವೇಳೆ ಅಲ್ಲಿನ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ‘ಮೆಲೋಡಿ’ ಟೋಫಿಗಳನ್ನು ಉಡುಗೊರೆಯಾಗಿ ನೀಡಿದ್ದನ್ನು ಉಲ್ಲೇಖಿಸಿ ‘X’ (ಟ್ವಿಟರ್) ನಲ್ಲಿ ಬರೆದುಕೊಂಡಿರುವ ರಾಹುಲ್, “ನಮ್ಮ ತಲೆಯ ಮೇಲೆ ಆರ್ಥಿಕ ಬಿರುಗಾಳಿ ಬೀಸುತ್ತಿದೆ, ಆದರೆ ನಮ್ಮ ಪ್ರಧಾನಿಯವರು ಇಟಲಿಯಲ್ಲಿ ಮಿಠಾಯಿಗಳನ್ನು ಹಂಚುವುದರಲ್ಲಿ ಬ್ಯುಸಿಯಾಗಿದ್ದಾರೆ. ರೈತರು, ಯುವಕರು, ಮಹಿಳೆಯರು, ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳು ಕಣ್ಣೀರು ಹಾಕುತ್ತಿದ್ದಾರೆ — ಪ್ರಧಾನಿ ನಗುತ್ತಾ ರೀಲ್ಸ್ ಮಾಡುತ್ತಿದ್ದಾರೆ ಮತ್ತು ಬಿಜೆಪಿಯವರು ಅದಕ್ಕೆ ಚಪ್ಪಾಳೆ ತಟ್ಟುತ್ತಿದ್ದಾರೆ. ಇದು ನಾಯಕತ್ವವಲ್ಲ, ಇದೊಂದು ಪ್ರಹಸನ (ನಾಟಕ)” ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಕ್ರಿಯಿಸಿ, ಮೋದಿ ಸರ್ಕಾರ ಮಾಡುತ್ತಿರುವ ಲೂಟಿಯ “ಸಂಕಟ”ವನ್ನು ಜನರು ಅನುಭವಿಸುತ್ತಿರುವಾಗಲೇ, ಪ್ರಧಾನಿಯವರು ಸಾರ್ವಜನಿಕರು ತಮ್ಮ ಭಾಷಣದ “ಮೆಲೋಡಿ” (ಮಧುರತೆ) ಯನ್ನು ಆನಂದಿಸಬೇಕೆಂದು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ. “ಕಳೆದ 11 ವರ್ಷಗಳ ಮೋದಿ ಆಡಳಿತದಲ್ಲಿ ಪ್ರತಿಯೊಬ್ಬ ಭಾರತೀಯನ ಮೇಲಿರುವ ಸರಾಸರಿ ಸಾಲದ ಪ್ರಮಾಣ 11 ಪಟ್ಟು ಹೆಚ್ಚಾಗಿದೆ….!! …ಇದೇ ಅವಧಿಯಲ್ಲಿ 229 ಉದ್ಯಮಿಗಳು ಮತ್ತು ಹೊಸದಾಗಿ ಸೇರ್ಪಡೆಯಾದ 26 ಬಿಲಿಯನೇರ್ಗಳ ಒಟ್ಟು ಆಸ್ತಿಯು ₹97.50 ಲಕ್ಷ ಕೋಟಿ ದಾಟಿದೆ ಎಂದು ವರದಿಯಾಗಿದೆ,” ಎಂದು ಖರ್ಗೆ ‘X’ ನಲ್ಲಿ ಬರೆದುಕೊಂಡಿದ್ದಾರೆ.
ಕಾಂಗ್ರೆಸ್ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ ಅವರು ದೇಶದಲ್ಲಿ ಹೆಚ್ಚುತ್ತಿರುವ ಬೆಲೆ ಏರಿಕೆ ಕುರಿತು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೇ 2014 ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪೆಟ್ರೋಲ್ ಬೆಲೆ 38% ಮತ್ತು ಡೀಸೆಲ್ ಬೆಲೆ 62% ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ. “2014 ರಲ್ಲಿ ₹414 ಇದ್ದ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ ಈಗ ದೆಹಲಿಯಲ್ಲಿ ₹913 ಆಗಿದೆ, ಇದು 121% ರಷ್ಟು ಹೆಚ್ಚಳವಾಗಿದೆ. ಅಷ್ಟೇ ಅಲ್ಲದೇ ದೇಶದ ಹಲವು ನಗರಗಳಲ್ಲಿ ಇದರ ಬೆಲೆ ₹1,000 ದಾಟಿದೆ,” ಎಂದಿದ್ದಾರೆ.
ಕಳೆದ 12 ವರ್ಷಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆ ಮತ್ತು ಅಬಕಾರಿ ಸುಂಕದ ಮೂಲಕ ಸರ್ಕಾರವು ಬರೋಬ್ಬರಿ ₹43 ಲಕ್ಷ ಕೋಟಿ ಸಂಗ್ರಹಿಸಿದೆ ಎಂದು ಹೇಳಿದ ಅವರು, ಇದರಲ್ಲಿ ಯಾವುದೇ ಒಂದು ಭಾಗದ ಸೌಲಭ್ಯವನ್ನು ಗ್ರಾಹಕರಿಗೆ, ರೈತರಿಗೆ ಅಥವಾ ಮಧ್ಯಮ ವರ್ಗದವರಿಗೆ ಪರಿಹಾರವಾಗಿ ಏಕೆ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ. “ಇಲ್ಲಿ ನಿಮ್ಮನ್ನು ಮತ್ತು ನನ್ನನ್ನು ಬಿಟ್ಟು ಉಳಿದವರೆಲ್ಲರೂ ಹಣ ಗಳಿಸುತ್ತಿದ್ದಾರೆ,” ಎಂದು ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.








