Operation Epic Fury:ಇರಾನ್ ವಿರುದ್ಧ ಅಮೆರಿಕ ಸೇನೆ ನಡೆಸಿದ ಅತ್ಯಂತ ಆಕ್ರಮಣಕಾರಿ ಮಿಲಿಟರಿ ಕಾರ್ಯಾಚರಣೆ ‘ಆಪರೇಷನ್ ಎಪಿಕ್ ಫ್ಯೂರಿ’ (Operation Epic Fury) ವೇಳೆ ಅಮೆರಿಕ ವಾಯುಪಡೆಗೆ ಭಾರಿ ಪ್ರಮಾಣದ ನಷ್ಟ ಉಂಟಾಗಿದೆ ಎಂದು ಯುಎಸ್ ಕಾಂಗ್ರೆಸ್ನ (ಅಮೆರಿಕ ಸಂಸತ್ತು) ಅಧಿಕೃತ ವರದಿ ಬಹಿರಂಗಪಡಿಸಿದೆ. ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಅಮೆರಿಕಾದ ಬರೋಬ್ಬರಿ 42 ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್ಗಳು ಸಂಪೂರ್ಣವಾಗಿ ನಾಶವಾಗಿವೆ ಅಥವಾ ತೀವ್ರವಾಗಿ ಹಾನಿಗೊಳಗಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಮೆರಿಕ ಸಂಸತ್ತಿಗೆ ಸಲ್ಲಿಕೆಯಾಗಿರುವ ಈ ರಹಸ್ಯ ವರದಿಯ ವಿವರಗಳು ಜಾಗತಿಕ ರಕ್ಷಣಾ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ.
ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಾಯು ಸಾಮರ್ಥ್ಯ ಹೊಂದಿರುವ ಅಮೆರಿಕಾದ ಇಷ್ಟೊಂದು ದೊಡ್ಡ ಪ್ರಮಾಣದ ವಿಮಾನಗಳು ಹಾನಿಗೊಳಗಾಗಲು ಇರಾನ್ನ ಕಠಿಣ ವಾಯು ರಕ್ಷಣಾ ವ್ಯವಸ್ಥೆ (Air Defence System) ಮತ್ತು ಕ್ಷಿಪಣಿ ದಾಳಿಗಳೇ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ.
ವರದಿಯ ಪ್ರಕಾರ, ಹಾನಿಗೊಳಗಾದ ವಿಮಾನಗಳಲ್ಲಿ ಅಮೆರಿಕಾದ ಅತ್ಯಂತ ದುಬಾರಿ ಹಾಗೂ ಅತ್ಯಾಧುನಿಕ ಫೈಟರ್ ಜೆಟ್ಗಳು ಮತ್ತು ಯುದ್ಧ ಹೆಲಿಕಾಪ್ಟರ್ಗಳು ಸೇರಿವೆ. ಕೆಲವು ವಿಮಾನಗಳು ಶತ್ರುಪಾಳಯದ ದಾಳಿಗೆ ತುತ್ತಾದರೆ, ಇನ್ನು ಕೆಲವು ತಾಂತ್ರಿಕ ದೋಷ ಹಾಗೂ ತುರ್ತು ಲ್ಯಾಂಡಿಂಗ್ ಸಮಯದಲ್ಲಿ ಹಾನಿಗೊಳಗಾಗಿವೆ.
ಇತ್ತೀಚೆಗಷ್ಟೇ ಅಮೆರಿಕ ಸಂಸತ್ತು ಇರಾನ್ ವಿರುದ್ಧ ಅಧ್ಯಕ್ಷರ ಯುದ್ಧ ಘೋಷಿಸುವ ಅಧಿಕಾರಕ್ಕೆ ಬ್ರೇಕ್ ಹಾಕುವ ನಿರ್ಣಯವನ್ನು ಅಂಗೀಕರಿಸಿತ್ತು. ಇದರ ಬೆನ್ನಲ್ಲೇ ಈ ಆಘಾತಕಾರಿ ವರದಿ ಹೊರಬಿದ್ದಿರುವುದು ಶ್ವೇತಭವನದ ಮಿಲಿಟರಿ ನೀತಿಗಳ ಮೇಲಿನ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದೆ.








