ಬೆಂಗಳೂರು: ದೇಶವ್ಯಾಪಿ ಔಷಧ ಮಳಿಗೆಗಳ ಬಂದ್‌ಗೆ ಅಖಿಲ ಭಾರತ ರಸಾಯನಶಾಸ್ತ್ರಜ್ಞರು ಮತ್ತು ಔಷಧವ್ಯಾಪಾರಿಗಳ ಸಂಘಟನೆ (AIOCD) ಕರೆ ನೀಡಿದ್ದರೂ ಸಹ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಮೆಡಿಕಲ್ ಶಾಪ್‌ಗಳು ಕ್ಲೋಸ್ ಆಗುವುದು ಬಹುತೇಕ ಅನುಮಾನವಾಗಿದೆ. ರಾಜ್ಯದ ಪ್ರಮುಖ ಔಷಧ ವ್ಯಾಪಾರಿಗಳ ಸಂಘಟನೆಗಳ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ, ರಾಜಧಾನಿಯಲ್ಲಿ ಎಂದಿನಂತೆ ಮೆಡಿಕಲ್ ಶಾಪ್‌ಗಳು ಕಾರ್ಯನಿರ್ವಹಿಸಲಿವೆ ಎಂದು ತಿಳಿದುಬಂದಿದೆ.
ರಾಜ್ಯದ ಎರಡು ಪ್ರಮುಖ ಸಂಘಟನೆಗಳ ನಡುವೆ ಏರ್ಪಟ್ಟಿರುವ ಆಂತರಿಕ ಕಿತ್ತಾಟವೇ ಈ ಗೊಂದಲಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ರಾಷ್ಟ್ರೀಯ ಸಂಘಟನೆಯಾದ AIOCD ನೀಡಿದ್ದ ಬಂದ್ ಕರೆಗೆ ಕರ್ನಾಟಕ ರಸಾಯನಶಾಸ್ತ್ರಜ್ಞರು ಮತ್ತು ಔಷಧವ್ಯಾಪಾರಿಗಳ ಸಂಘ (KCDA) ಸಂಪೂರ್ಣ ಬೆಂಬಲ ಘೋಷಿಸಿತ್ತು. ಆದರೆ, ಮತ್ತೊಂದೆಡೆ ಕರ್ನಾಟಕ ಫಾರ್ಮಸಿಸ್ಟ್ಸ್ ಮತ್ತು ಡ್ರಗ್ಗಿಸ್ಟ್ಸ್ ಅಸೋಸಿಯೇಷನ್ (KPRDO) ಇದಕ್ಕೆ ಬೆಂಬಲ ನೀಡಲು ನಿರಾಕರಿಸಿದೆ. ಈ ಭಿನ್ನಾಭಿಪ್ರಾಯದಿಂದಾಗಿ ಬಂದ್ ಸಂಪೂರ್ಣ ಯಶಸ್ವಿಯಾಗುವುದು ಅನುಮಾನವಾಗಿದೆ.
ಸಾರ್ವಜನಿಕರಿಗೆ ನಿರಾಳ: ಮುಕ್ತವಾಗಿರಲಿವೆ ಪ್ರಮುಖ ಔಷಧ ಮಳಿಗೆಗಳು
ಸಂಘಟನೆಗಳ ನಡುವಿನ ಈ ಆಂತರಿಕ ಗೊಂದಲ ಹಾಗೂ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ, ಬಹುತೇಕ ಸಂಘಟನೆಗಳು ಇಂದಿನ ಬಂದ್ ನಿರ್ಧಾರದಿಂದ ಕೊನೆಕ್ಷಣದಲ್ಲಿ ಹಿಂದೆ ಸರಿದಿವೆ ಎನ್ನಲಾಗಿದೆ. ಪರಿಣಾಮವಾಗಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಬೆಂಗಳೂರಿನಾದ್ಯಂತ ಎಂದಿನಂತೆ ಔಷಧ ಮಳಿಗೆಗಳು ತೆರೆದಿರಲಿವೆ. ಮುಂಜಾಗ್ರತಾ ಕ್ರಮವಾಗಿ ರೋಗಿಗಳಿಗೆ ತೊಂದರೆಯಾಗದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.
ಯಾವೆಲ್ಲಾ ಮೆಡಿಕಲ್ ಶಾಪ್‌ಗಳು ತೆರೆದಿರುತ್ತವೆ?
ಸರ್ಕಾರಿ ಆಸ್ಪತ್ರೆಗಳಲ್ಲಿನ ಅಧಿಕೃತ ಔಷಧ ಮಳಿಗೆಗಳು.
ಸರ್ಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳ ಆವರಣದಲ್ಲಿರುವ ಖಾಸಗಿ ಮೆಡಿಕಲ್ ಶಾಪ್‌ಗಳು.
ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ಸ್ವಂತ ಔಷಧ ಮಳಿಗೆಗಳು.
ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಔಷಧ ಸಿಗುವ ‘ಜನೌಷಧಿ ಕೇಂದ್ರಗಳು’.
ಇದರೊಂದಿಗೆ ನಗರದ ಪ್ರಮುಖ ಮೆಡಿಕಲ್ ಚೈನ್ ನೆಟ್‌ವರ್ಕ್‌ಗಳಾದ ಅಪೋಲೋ ಫಾರ್ಮಸಿ (Apollo), ಮೆಡ್‌ಪ್ಲಸ್ (MedPlus), ಮತ್ತು ಆಸ್ಟರ್ ಮೆಡಿ ಶಾಪ್‌ಗಳು (Aster Medi Shop) ಸಾರ್ವಜನಿಕರ ಸೇವೆಗೆ ಲಭ್ಯವಿರಲಿವೆ. ಅಷ್ಟೇ ಅಲ್ಲದೆ, ಬಂದ್‌ನಿಂದ ದೂರ ಉಳಿದಿರುವ KPRDO ಸಂಘಟನೆಗೆ ಒಳಪಡುವ ಎಲ್ಲಾ ಖಾಸಗಿ ಮೆಡಿಕಲ್ ಶಾಪ್‌ಗಳು ಸಹ ಎಂದಿನಂತೆ ಗ್ರಾಹಕರಿಗೆ ಸೇವೆ ನೀಡಲಿವೆ. ಹೀಗಾಗಿ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ.








