ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಭಾರತ ನೀಡಿದ ಪ್ರತ್ಯುತ್ತರವಾದ ‘ಆಪರೇಷನ್ ಸಿಂದೂರ್’, ದೇಶದ ಮಿಲಿಟರಿ ಶಿಸ್ತು, ರಾಜತಾಂತ್ರಿಕ ಸಂಕೇತ ಹಾಗೂ ಆರ್ಥಿಕ ಸಂಕಲ್ಪವನ್ನು ಒಂದೇ ಸಂಘಟಿತ ರಾಷ್ಟ್ರೀಯ ಶಕ್ತಿಯಾಗಿ ಪ್ರದರ್ಶಿಸಿದೆ ಎಂದು ಭೂಸೇನೆ ಮುಖ್ಯಸ್ಥರಾದ ಜನರಲ್ ಉಪೇಂದ್ರ ದ್ವಿವೇದಿ ಅವರು ಮಂಗಳವಾರ ಹೇಳಿದ್ದಾರೆ.
’ಸೆಂಟರ್ ಫಾರ್ ಲ್ಯಾಂಡ್ ವಾರ್ಫೇರ್ ಸ್ಟಡೀಸ್’ ಎಂಬ ಥಿಂಕ್ ಟ್ಯಾಂಕ್ ಆಯೋಜಿಸಿದ್ದ ಸೆಮಿನಾರ್ನಲ್ಲಿ ಮಾತನಾಡಿದ ಅವರು, “ಈ ಕಾರ್ಯಾಚರಣೆಯು ಶತ್ರುಗಳ ಕೋಟೆಯೊಳಗೆ ಅತ್ಯಂತ ಆಳವಾಗಿ ನುಗ್ಗಿ ದಾಳಿ ಮಾಡಿದೆ, ಭಯೋತ್ಪಾದಕ ಮೂಲಸೌಕರ್ಯಗಳನ್ನು ಧ್ವಂಸಗೊಳಿಸಿದೆ ಮತ್ತು ದೀರ್ಘಕಾಲದಿಂದ ಇದ್ದ ಕಾರ್ಯತಂತ್ರದ ಊಹೆಯನ್ನು (ಪಾಕಿಸ್ತಾನದ ಪರಮಾಣು ಬ್ಲ್ಯಾಕ್ಮೇಲ್) ಪುಡಿಪುಡಿ ಮಾಡಿದೆ. ತದನಂತರ ಅತ್ಯಂತ ಉದ್ದೇಶಪೂರ್ವಕವಾಗಿ ಮತ್ತು ಯೋಜಿತವಾಗಿ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ,” ಎಂದರು.
2025ರ ಮೇ 7ರ ಮುಂಜಾನೆ ಆರಂಭವಾದ ‘ಆಪರೇಷನ್ ಸಿಂದೂರ್’, ಪಾಕಿಸ್ತಾನ ಪ್ರಾಯೋಜಿತ ಪಹಲ್ಗಾಮ್ ಉಗ್ರರ ದಾಳಿಗೆ ನವದೆಹಲಿ ನೀಡಿದ ಪ್ರಬಲ ಪ್ರತ್ಯುತ್ತರವಾಗಿತ್ತು. ಆ ಉಗ್ರರ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು. ಈ ಕಾರ್ಯಾಚರಣೆಯು ಫೈಟರ್ ಜೆಟ್ಗಳು, ಕ್ಷಿಪಣಿಗಳು, ಡ್ರೋನ್ಗಳು, ದೀರ್ಘ ವ್ಯಾಪ್ತಿಯ ಶಸ್ತ್ರಾಸ್ತ್ರಗಳು ಮತ್ತು ಭಾರೀ ಫಿರಂಗಿಗಳೊಂದಿಗೆ ನಾಲ್ಕು ದಿನಗಳ ಕಾಲ ಪರಸ್ಪರ ದಾಳಿ ಮತ್ತು ಪ್ರತಿದಾಳಿಗಳಿಗೆ ಕಾರಣವಾಯಿತು. ಅಂತಿಮವಾಗಿ ಮೇ 10 ರಂದು ಎರಡೂ ಕಡೆಯವರು ಎಲ್ಲಾ ಮಿಲಿಟರಿ ಕ್ರಮಗಳನ್ನು ನಿಲ್ಲಿಸುವ ಒಪ್ಪಂದಕ್ಕೆ ಬಂದರು.
”88 ಗಂಟೆಗಳ ನಂತರ ಉದ್ದೇಶಪೂರ್ವಕವಾಗಿ ಕಾರ್ಯಾಚರಣೆಯನ್ನು ನಿಲ್ಲಿಸಿದ್ದು ‘ಸ್ಮಾರ್ಟ್ ಪವರ್’ (ಬುದ್ಧಿವಂತ ಶಕ್ತಿ) ನ ಅತ್ಯುನ್ನತ ಅಭಿವ್ಯಕ್ತಿಯಾಗಿದೆ. ಯಾವ ಆಯುಧವನ್ನು, ಎಷ್ಟು ತೀವ್ರತೆಯಲ್ಲಿ ಮತ್ತು ಯಾವಾಗ ಬಳಸಬೇಕು ಹಾಗೂ ಮಿಲಿಟರಿ ಯಶಸ್ಸನ್ನು ಕಾರ್ಯತಂತ್ರದ ವಿಜಯವಾಗಿ ಹೇಗೆ ಪರಿವರ್ತಿಸಬೇಕು ಎಂಬುದನ್ನು ಇದು ನಿಖರವಾಗಿ ತೋರಿಸಿಕೊಟ್ಟಿದೆ,” ಎಂದು ಸೇನಾ ಮುಖ್ಯಸ್ಥರು ತಿಳಿಸಿದರು.
ಮೇ 8 ರಂದು ಮಾತನಾಡಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, “ಆಪರೇಷನ್ ಸಿಂದೂರ್ ಭಾರತದ ಸಾಮೂಹಿಕ ಸಂಕಲ್ಪ ಮತ್ತು ಹೊಸ ಮಿಲಿಟರಿ ನೀತಿಯನ್ನು ಜಗತ್ತಿಗೆ ಸಾರಿದೆ. ಈ ‘ಕಡಿಮೆ ಅವಧಿಯ, ಆಳವಾದ ನುಗ್ಗುವಿಕೆ, ಹೆಚ್ಚಿನ ತೀವ್ರತೆಯ ಮತ್ತು ಬಲವಾದ ಪ್ರಭಾವದ’ ಕಾರ್ಯಾಚರಣೆಯು ಪಾಕಿಸ್ತಾನವನ್ನು ಶರಣಾಗುವಂತೆ ಮಾಡಿತು,” ಎಂದು ಹೇಳಿದ್ದರು.
ಮುಂದುವರಿದು ಮಾತನಾಡಿದ ದ್ವಿವೇದಿ ಅವರು, “ಇಂದಿನ ದಿನಗಳಲ್ಲಿ ವ್ಯೂಹಾತ್ಮಕ ದುರ್ಬಲತೆ ಎಂದರೆ ಕೇವಲ ಮಿಲಿಟರಿ ಶಕ್ತಿಯ ಕೊರತೆಯಲ್ಲ; ಬದಲಿಗೆ ವಿದೇಶಿ ಪೂರೈಕೆ ಸರಪಳಿಗಳು, ನಿರ್ಣಾಯಕ ಖನಿಜಗಳು ಮತ್ತು ಡಿಜಿಟಲ್ ಮೂಲಸೌಕರ್ಯಗಳ ಮೇಲಿನ ಅವಲಂಬನೆಯಾಗಿದೆ. ಈ ಅವಲಂಬನೆಗಳನ್ನು ವ್ಯವಸ್ಥಿತವಾಗಿ ನಿರ್ಮೂಲನೆ ಮಾಡುವುದು ಕೇವಲ ಆರ್ಥಿಕ ಆದ್ಯತೆಯಲ್ಲ, ಬದಲಿಗೆ ಭದ್ರತೆಯ ಅನಿವಾರ್ಯತೆಯಾಗಿದೆ. ಇದಕ್ಕಾಗಿ ಸಮಾನ ಮನಸ್ಕ ರಾಷ್ಟ್ರಗಳೊಂದಿಗೆ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಂದುವುದು ಮತ್ತು ನಿರಂತರ ಉತ್ಪಾದನೆಗಾಗಿ ಪ್ರಮುಖ ಕೈಗಾರಿಕೆಗಳೊಂದಿಗೆ ಸರ್ಕಾರದ ಸಹಭಾಗಿತ್ವವನ್ನು ಉತ್ತೇಜಿಸುವುದು ಅಗತ್ಯವಾಗಿದೆ,” ಎಂದರು.








