ಬೆಂಗಳೂರು: ತಾತ್ಕಾಲಿಕವಾಗಿ ವಿದ್ಯುತ್ ಮೀಟರ್‌ಗೆ ಸಂಪರ್ಕ ಕಲ್ಪಿಸಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಬೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತ (AEE) ಹಾಗೂ ವಿದ್ಯುತ್ ಗುತ್ತಿಗೆದಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ನಗರದ ಜೆ.ಪಿ. ನಗರದ ಬಳಿಯ ಗೌರವ್ ನಗರದಲ್ಲಿರುವ ಬೆಸ್ಕಾಂ ಕಚೇರಿಯಲ್ಲಿ ಈ ದಾಳಿ ನಡೆದಿದ್ದು, ಬೆಸ್ಕಾಂ ಎಇಇ ಮನೋಜ್ ಕುಮಾರ್ ಮತ್ತು ವಿದ್ಯುತ್ ಗುತ್ತಿಗೆದಾರ ಕಾಂತರಾಜು ಬಂಧಿತ ಆರೋಪಿಗಳಾಗಿದ್ದಾರೆ.
ಘಟನೆಯ ವಿವರ: ರಘುರಾಜ್ ಎಂಬುವವರು ತಮ್ಮ ಕಟ್ಟಡದ ತಾತ್ಕಾಲಿಕ ಮೀಟರ್‌ಗೆ ವಿದ್ಯುತ್ ಪೂರೈಕೆ ಕಲ್ಪಿಸುವಂತೆ ಬೆಸ್ಕಾಂ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ಕೆಲಸ ಮಾಡಿಕೊಡಲು ಎಇಇ ಮನೋಜ್ ಕುಮಾರ್ 50,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅಲ್ಲದೆ, ಲಂಚದ ಹಣವನ್ನು ವಿದ್ಯುತ್ ಗುತ್ತಿಗೆದಾರ ಕಾಂತರಾಜು ಕೈಗೆ ನೀಡುವಂತೆ ಅರ್ಜಿದಾರ ರಘುರಾಜ್ ಅವರಿಗೆ ಸೂಚಿಸಿದ್ದರು.
ಲಂಚ ನೀಡಲು ಇಷ್ಟವಿಲ್ಲದ ರಘುರಾಜ್ ಅವರು ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ, ಇಂದು ರಘುರಾಜ್ ಅವರಿಂದ ಗುತ್ತಿಗೆದಾರ ಕಾಂತರಾಜು 50,000 ರೂಪಾಯಿ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ಜಂಟಿ ದಾಳಿ ನಡೆಸಿ, ಇಬ್ಬರನ್ನೂ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್ ದೇವರಾಜ್ ಅವರ ನೇತೃತ್ವದಲ್ಲಿ ಈ ಯಶಸ್ವಿ ದಾಳಿ ನಡೆದಿದ್ದು, ಸದ್ಯ ಲೋಕಾಯುಕ್ತ ಪೊಲೀಸರು ಇಬ್ಬರನ್ನೂ ಬಂಧಿಸಿ ಮುಂದಿನ ಕಾನೂನು ಕ್ರಮ ಹಾಗೂ ವಿಚಾರಣೆ ಕೈಗೊಂಡಿದ್ದಾರೆ.
BREAKING: ರಾಜ್ಯದ ಸರ್ಕಾರಿ ವಸತಿ ಶಾಲೆಗಳ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಿದ ಕೆಇಎ
BIG NEWS: ದುಬಾರೆಯಲ್ಲಿ ಮಾರ್ತಾಂಡ ಆನೆ ಸಾವಿಗೆ ಕಾರಣವಾದ ‘ಕಂಜನ್’ ದಸರಾ ಜಂಬೂಸವಾರಿಯಿಂದ ಔಟ್!








