ಸ್ಯಾನ್ ಡಿಯಾಗೋ (ಅಮೆರಿಕ): ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ ಡಿಯಾಗೋ ಕೌಂಟಿಯ ಅತ್ಯಂತ ದೊಡ್ಡ ಮಸೀದಿಯಾದ ‘ಇಸ್ಲಾಮಿಕ್ ಸೆಂಟರ್’ ಆವರಣದಲ್ಲಿ ಭೀಕರ ಗುಂಡಿನ ದಾಳಿ ನಡೆದಿದ್ದು, ಭದ್ರತಾ ಸಿಬ್ಬಂದಿ ಸೇರಿದಂತೆ ಮೂವರು ಅಮಾಯಕರು ಸಾವನ್ನಪ್ಪಿದ್ದಾರೆ. ದಾಳಿ ನಡೆಸಿದ ಇಬ್ಬರು ಅಪ್ರಾಪ್ತ ವಯಸ್ಕ ಶಂಕಿತ ಬಂದೂಕುಧಾರಿಗಳು ಕೂಡ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆಯಲ್ಲಿ ಒಟ್ಟು ಐದು ಜನರು ಮೃತಪಟ್ಟಿದ್ದಾರೆ.
ಈ ದಾಳಿಯನ್ನು ‘ದ್ವೇಷದ ಅಪರಾಧ’ (Hate Crime) ಎಂದು ಶಂಕಿಸಲಾಗಿದ್ದು, ಸ್ಥಳೀಯ ಪೊಲೀಸರೊಂದಿಗೆ ಅಮೆರಿಕದ ಪ್ರಮುಖ ತನಿಖಾ ಸಂಸ್ಥೆ ಎಫ್‌ಬಿಐ (FBI) ತನಿಖೆಯನ್ನು ಕೈಗೆತ್ತಿಕೊಂಡಿದೆ.
ಸ್ಯಾನ್ ಡಿಯಾಗೋ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಸೋಮವಾರ ಮಧ್ಯಾಹ್ನದ ಪ್ರಾರ್ಥನೆಗೂ ಮುನ್ನ ಇಬ್ಬರು ಯುವಕರು ಮಿಲಿಟರಿ ಶೈಲಿಯ (Camouflage) ಬಟ್ಟೆಗಳನ್ನು ಧರಿಸಿ ಮಸೀದಿಯ ಆವರಣಕ್ಕೆ ನುಗ್ಗಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ.
ಮಸೀದಿಯ ಹೊರಭಾಗದಲ್ಲಿ ತಡೆದ ಭದ್ರತಾ ಸಿಬ್ಬಂದಿ (Security Guard) ಹಾಗೂ ಇಬ್ಬರು ಸಿಬ್ಬಂದಿಯ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದು, ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಭದ್ರತಾ ಸಿಬ್ಬಂದಿಯ ಸಮಯಪ್ರಜ್ಞೆ ಮತ್ತು ಧೈರ್ಯದಿಂದಾಗಿ ಮಸೀದಿಯ ಒಳಗಿದ್ದ ನೂರಾರು ಜನರ ಪ್ರಾಣ ಉಳಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಯ ನಂತರ ಮಸೀದಿಯಿಂದ ಸ್ವಲ್ಪ ದೂರದಲ್ಲಿ ನಿಲ್ಲಿಸಲಾಗಿದ್ದ ಕಾರಿನೊಳಗೆ ಇಬ್ಬರೂ ಶಂಕಿತರು (17 ಮತ್ತು 19 ವರ್ಷದ ಯುವಕರು) ತಮಗೆ ತಾವೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಘಟನೆಗಿಂತ ಎರಡು ಗಂಟೆಗಳ ಮುಂಚೆ ಶಂಕಿತರಲ್ಲಿ ಒಬ್ಬನ ತಾಯಿ ಪೊಲೀಸರಿಗೆ ಕರೆ ಮಾಡಿ, “ನನ್ನ ಮಗ ಮನೆಯಿಂದ ಕಾಣೆಯಾಗಿದ್ದಾನೆ, ಆತ ಮಾನಸಿಕವಾಗಿ ನೊಂದಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ಸೂಚನೆ ನೀಡಿದ್ದಾನೆ. ಅಷ್ಟೇ ಅಲ್ಲದೆ ಮನೆಯಲ್ಲಿದ್ದ ಮೂರು ಗನ್‌ಗಳು ಮತ್ತು ಕಾರನ್ನು ತೆಗೆದುಕೊಂಡು ಹೋಗಿದ್ದಾನೆ” ಎಂದು ದೂರು ನೀಡಿದ್ದರು. ಪೊಲೀಸರು ಆತನನ್ನು ಪತ್ತೆ ಹಚ್ಚುವಷ್ಟರಲ್ಲೇ ಈ ಭೀಕರ ಕೃತ್ಯ ನಡೆದುಹೋಗಿದೆ.








