ವಾಷಿಂಗ್ಟನ್: ಇರಾನ್ ಮತ್ತು ಅಮೆರಿಕ ನಡುವಿನ ತೀವ್ರ ರಾಜತಾಂತ್ರಿಕ ಬಿಕ್ಕಟ್ಟಿನ ಮಧ್ಯೆ ಈಗ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಇರಾನ್ ಮೇಲೆ ನಡೆಸಲು ಯೋಜಿಸಲಾಗಿದ್ದ ಭೀಕರ ದಾಳಿಯನ್ನು ಸದ್ಯಕ್ಕೆ ‘ಮುಂದೂಡಲಾಗಿದೆ’ (Put off) ಎಂದು ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇರಾನ್ ರಾಜಧಾನಿ ಟೆಹ್ರಾನ್ (Tehran) ನಾಯಕರೊಂದಿಗೆ ನಡೆದಿರುವ ರಹಸ್ಯ ಮತ್ತು ಅತ್ಯಂತ ‘ದೊಡ್ಡ ಮಟ್ಟದ ಚರ್ಚೆ’ಯ (Big discussion) ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಟ್ರಂಪ್ ಸ್ಫೋಟಕ ಮಾಹಿತಿ ನೀಡಿದ್ದಾರೆ.
ದಾಳಿಯನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಬದಲು ಕೇವಲ ಮುಂದೂಡಲಾಗಿದೆ ಎಂದು ಹೇಳಿರುವುದು ಜಾಗತಿಕ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಗಲ್ಫ್ ರಾಷ್ಟ್ರಗಳ ಸಂಧಾನದ ಬೆನ್ನಲ್ಲೇ, ಈಗ ಅಮೆರಿಕ ಮತ್ತು ಇರಾನ್ (ಟೆಹ್ರಾನ್) ನಾಯಕರ ನಡುವೆ ನೇರ ಹಾಗೂ ಸುದೀರ್ಘವಾದ ಉನ್ನತ ಮಟ್ಟದ ಚರ್ಚೆಗಳು ನಡೆದಿವೆ. ಈ ಮಾತುಕತೆಯಲ್ಲಿ ಯುದ್ಧವನ್ನು ತಪ್ಪಿಸುವ ನಿಟ್ಟಿನಲ್ಲಿ ಕೆಲವು ಪ್ರಮುಖ ರಾಜತಾಂತ್ರಿಕ ಪ್ರಸ್ತಾವನೆಗಳನ್ನು ಇರಾನ್ ಅಮೆರಿಕದ ಮುಂದಿಟ್ಟಿದೆ ಎನ್ನಲಾಗಿದೆ.
ಟ್ರಂಪ್ ತಮ್ಮ ಹೇಳಿಕೆಯಲ್ಲಿ ದಾಳಿಯ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಟ್ಟಿಲ್ಲ, ಬದಲಿಗೆ ಸದ್ಯದ ಮಾತುಕತೆಯ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಮುಂದೂಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಮಾತುಕತೆ ವಿಫಲವಾದರೆ ಅಮೆರಿಕ ಸೇನೆ ಮತ್ತೆ ಆಕ್ಷನ್ ತೆಗೆದುಕೊಳ್ಳುವ ಮುನ್ಸೂಚನೆ ಇದಾಗಿದೆ.








