ನಮ್ಮ ಸನಾತನ ಧರ್ಮದಲ್ಲಿ ತುಳಸಿ ಗಿಡಕ್ಕೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ಪ್ರತಿಯೊಬ್ಬರ ಮನೆಯ ಅಂಗಳದಲ್ಲೂ ತುಳಸಿ ಕಟ್ಟೆ ಇರುವುದು, ಬೆಳಗು-ಸಂಜೆ ದೀಪ ಹಚ್ಚಿ ಪೂಜಿಸುವುದು ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವ ಶ್ರೇಷ್ಠ ಸಂಪ್ರದಾಯ. ತುಳಸಿ ನೆಲೆಸಿರುವ ಜಾಗದಲ್ಲಿ ಲಕ್ಷ್ಮಿ ದೇವಿ ವಾಸಿಸುತ್ತಾಳೆ ಮತ್ತು ಆ ಇಡೀ ಮನೆ ಸದಾ ಐಶ್ವರ್ಯದಿಂದ ತುಂಬಿರುತ್ತದೆ ಎಂಬುದು ಹಿರಿಯರ ನಂಬಿಕೆ.
ಆದರೆ, ಕೆಲವರ ಮನೆಯಲ್ಲಿ ಎಷ್ಟೇ ಭಕ್ತಿಯಿಂದ ಪೂಜೆ ಮಾಡಿದರೂ, ತುಳಸಿ ಗಿಡ ಎಷ್ಟು ಹಚ್ಚ ಹಸಿರಾಗಿ ಬೆಳೆದಿದ್ದರೂ ನೆಮ್ಮದಿ ಇರುವುದಿಲ್ಲ. ಸದಾ ಜಗಳ, ಮಕ್ಕಳ ಓದಿನಲ್ಲಿ ಏಕಾಗ್ರತೆ ಕೊರತೆ, ಮನಸ್ಸಿನಲ್ಲಿ ಏನೋ ಒಂಥರಾ ಆತಂಕ ಕಾಡುತ್ತಲೇ ಇರುತ್ತದೆ. ಧರ್ಮಶಾಸ್ತ್ರಗಳ ಪ್ರಕಾರ, ಪೂಜೆ ಮಾಡಿದರೂ ತೃಪ್ತಿ ಸಿಗುತ್ತಿಲ್ಲ ಎಂದರೆ ಅದಕ್ಕೆ ನಾವು ತುಳಸಿ ಕಟ್ಟೆಯ ಬಳಿ ತಿಳಿಯದೇ ಮಾಡುವ ಕೆಲವು ಸಣ್ಣ ತಪ್ಪುಗಳೇ ಕಾರಣವಿರಬಹುದು!
ತುಳಸಿ ಕಟ್ಟೆಯ ಬಳಿ ಮಾಡಬಾರದ ತಪ್ಪುಗಳು:
ಕಸದ ಬುಟ್ಟಿ ಮತ್ತು ಹಳೆಯ ಸಾಮಗ್ರಿಗಳನ್ನು ಇಡಬೇಡಿ: ಇತ್ತೀಚಿನ ದಿನಗಳಲ್ಲಿ ಜಾಗದ ಕೊರತೆಯಿಂದಲೋ ಅಥವಾ ನಿರ್ಲಕ್ಷ್ಯದಿಂದಲೋ ಅನೇಕರು ಕಸದ ಬುಟ್ಟಿ, ಒಡೆದ ಪ್ಲಾಸ್ಟಿಕ್ ವಸ್ತುಗಳು ಅಥವಾ ಹಳೆಯ ಸಾಮಗ್ರಿಗಳನ್ನು ತುಳಸಿ ಕಟ್ಟೆಯ ಪಕ್ಕದಲ್ಲೇ ಇಡುತ್ತಾರೆ. ಇದು ಶಾಸ್ತ್ರದ ಪ್ರಕಾರ ದೊಡ್ಡ ತಪ್ಪು. ತುಳಸಿ ಕೇವಲ ಒಂದು ಗಿಡವಲ್ಲ, ಅದು ಶ್ರೀಮನ್ನಾರಾಯಣನಿಗೆ ಅತ್ಯಂತ ಪ್ರಿಯವಾದ ಪವಿತ್ರ ರೂಪ.
ಚಪ್ಪಲಿ ಹಾಗೂ ಮಲಿನ ವಸ್ತುಗಳಿಂದ ದೂರವಿಡಿ: ತುಳಸಿ ಕಟ್ಟೆಯ ಸುತ್ತಮುತ್ತ ಎಂದಿಗೂ ಚಪ್ಪಲಿಗಳು, ಒಗೆಯದ ಹಳೆಯ ಬಟ್ಟೆಗಳು ಇರಬಾರದು. ಇಂತಹ ನಕಾರಾತ್ಮಕ ವಸ್ತುಗಳಿಂದ ಆ ಜಾಗದ ಪವಿತ್ರತೆ ಹಾಳಾಗುತ್ತದೆ.
ಗಿಡ ಒಣಗಲು ಬಿಡಬೇಡಿ: ತುಳಸಿ ಗಿಡವು ಒಣಗದಂತೆ ನೋಡಿಕೊಳ್ಳುವುದು ಮನೆಯ ಯಜಮಾನನ ಜವಾಬ್ದಾರಿ. ನಿರ್ಲಕ್ಷ್ಯದಿಂದ ತುಳಸಿ ಒಣಗಿದರೆ, ಅದು ಮನೆಯಲ್ಲಿನ ಆಧ್ಯಾತ್ಮಿಕ ಶಕ್ತಿ ಹಾಗೂ ಧನಾತ್ಮಕ ಶಕ್ತಿ ಕ್ಷೀಣಿಸುತ್ತಿರುವುದರ ಸಂಕೇತವಾಗಿದೆ.
ಸೂರ್ಯಾಸ್ತದ ನಂತರ ಎಲೆ ಕೀಳಬೇಡಿ: ಸೂರ್ಯಾಸ್ತದ ನಂತರ ಅಥವಾ ರಾತ್ರಿಯ ಸಮಯದಲ್ಲಿ ತುಳಸಿ ಎಲೆಗಳನ್ನು ಕೀಳುವುದು ಮಹಾ ಪಾಪ ಎಂದು ಪರಿಗಣಿಸಲಾಗುತ್ತದೆ. ಆ ಸಮಯದಲ್ಲಿ ದೇವತಾ ಶಕ್ತಿಗಳು ವಿಶ್ರಾಂತಿ ಪಡೆಯುತ್ತವೆ ಎಂಬ ನಂಬಿಕೆಯಿದೆ.
ನಕಾರಾತ್ಮಕ ಭಾವನೆಗಳನ್ನು ಹೊರಹಾಕಬೇಡಿ: ತುಳಸಿ ಕಟ್ಟೆಯ ಬಳಿ ಕುಳಿತು ಅಳುವುದು, ಬೇಸರ ಮಾಡಿಕೊಳ್ಳುವುದು ಅಥವಾ ಕೋಪದಿಂದ ಇತರರನ್ನು ನಿಂದಿಸುವುದು ಮಾಡಬಾರದು. ಇತ್ತೀಚೆಗೆ ಅನೇಕರು ಫೋನ್ಗಳಲ್ಲಿ ಜಗಳವಾಡುತ್ತಾ ತುಳಸಿ ಕಟ್ಟೆಯ ಸುತ್ತ ಸುತ್ತುತ್ತಿರುತ್ತಾರೆ. ತುಳಸಿ ಎಂಬುದು ಧನಾತ್ಮಕ ಶಕ್ತಿಯನ್ನು (Positive Energy) ಆಕರ್ಷಿಸುವ ಕೇಂದ್ರ. ಅಲ್ಲಿ ನಾವು ನಕಾರಾತ್ಮಕ ಭಾವನೆಗಳನ್ನು ವ್ಯಕ್ತಪಡಿಸಿದರೆ ಮನೆಯಲ್ಲಿ ಆತಂಕ ಮತ್ತಷ್ಟು ಹೆಚ್ಚಾಗುತ್ತದೆ.
ಲಕ್ಷ್ಮಿ ಕೃಪೆಗಾಗಿ ಏನು ಮಾಡಬೇಕು?
ಪ್ರಾರ್ಥನೆ ಮಾಡುವಾಗ ‘ನನಗೇಕೆ ಇಷ್ಟೊಂದು ಕಷ್ಟಗಳು’ ಎಂಬ ನಿರಾಶೆಯ ಭಾವನೆಯಿಂದಲ್ಲದೆ, ‘ಭಗವಂತ ನನಗೆ ಧೈರ್ಯ ನೀಡುತ್ತಾನೆ’ ಎಂಬ ಪೂರ್ಣ ವಿಶ್ವಾಸದಿಂದ ಬೇಡಿಕೊಳ್ಳಬೇಕು.
ಪ್ರತಿ ಶುಕ್ರವಾರ ಸಾಯಂಕಾಲ ತುಳಸಿ ಕಟ್ಟೆಯ ಸುತ್ತಮುತ್ತಲಿನ ಜಾಗವನ್ನು ಸ್ವಚ್ಛಗೊಳಿಸಿ, ಲಕ್ಷ್ಮಿ ಅಷ್ಟೋತ್ತರವನ್ನು ಕೇಳುತ್ತಾ ಒಂದು ಸಣ್ಣ ತುಪ್ಪದ ದೀಪವನ್ನು ಹಚ್ಚಬೇಕು. ಆ ಸಮಯದಲ್ಲಿ ಮನೆಯವರೆಲ್ಲರೂ ಒಟ್ಟಾಗಿ ಪ್ರಶಾಂತವಾಗಿ, ಪ್ರೀತಿಯಿಂದ ಮಾತನಾಡಬೇಕು. ಶುದ್ಧ ಮನಸ್ಸಿನಿಂದ ಮಾಡುವ ಇಂತಹ ಸಣ್ಣ ಬದಲಾವಣೆಗಳು ನಿಮ್ಮ ಮನೆಯಲ್ಲಿ ಮತ್ತೆ ಲಕ್ಷ್ಮಿ ಕಟಾಕ್ಷ ಹಾಗೂ ಅಪಾರ ಶಾಂತಿಯನ್ನು ತರಲಿವೆ.








