ನಸುಕಿನ ಜಾವ ನಡೆದ ದುರಂತ: ಕಾಸಾ ಪೊಲೀಸ್ ಠಾಣಾ ವ್ಯಾಪ್ತಿಯ ಧನಿವಾರಿ ಎಂಬಲ್ಲಿ ನಸುಕಿನ ಜಾವ ಸುಮಾರು 4 ಗಂಟೆಗೆ ಈ ಘಟನೆ ನಡೆದಿದೆ. ದಹಾನುವಿನ ಬಾಪು ಗ್ರಾಮದಿಂದ ಮದುವೆ ಸಮಾರಂಭಕ್ಕಾಗಿ ಧನಿವಾರಿಗೆ ಹೊರಟಿದ್ದ ಟ್ರಕ್‌ನಲ್ಲಿ ಸುಮಾರು 40 ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಈ ವೇಳೆ ಗುಜರಾತ್‌ನಿಂದ ಮುಂಬೈ ಕಡೆಗೆ ವೇಗವಾಗಿ ಚಲಿಸುತ್ತಿದ್ದ ಕಂಟೈನರ್ ಟ್ರಕ್ ನಿಯಂತ್ರಣ ತಪ್ಪಿ ಮದುವೆ ಜನ ಇದ್ದ ವಾಹನಕ್ಕೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಎರಡೂ ವಾಹನಗಳು ರಸ್ತೆಯಲ್ಲೇ ಉರುಳಿ ಬಿದ್ದಿದ್ದು, ವಾಹನಗಳು ಸಂಪೂರ್ಣ ಜಖಂಗೊಂಡಿವೆ.
ನಜ್ಜುಗುಜ್ಜಾದ ವಾಹನದಲ್ಲಿ ಸಿಲುಕಿದ ಪ್ರಯಾಣಿಕರು: ಅಪಘಾತದ ನಂತರ ಮದುವೆ ಜನ ಪ್ರಯಾಣಿಸುತ್ತಿದ್ದ ವಾಹನದ ಅವಶೇಷಗಳ ನಡುವೆ ಹಲವು ಪ್ರಯಾಣಿಕರು ಸಿಲುಕಿಕೊಂಡಿದ್ದರು. ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು, ಪೊಲೀಸರು ಮತ್ತು ರಕ್ಷಣಾ ತಂಡಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ನಜ್ಜುಗುಜ್ಜಾಗಿದ್ದ ವಾಹನವನ್ನು ಕತ್ತರಿಸಿ ಒಳಗಿದ್ದವರನ್ನು ಹೊರತೆಗೆಯಲಾಯಿತು.
ಗಾಯಾಳುಗಳ ಸ್ಥಿತಿ ಚಿಂತಾಜನಕ: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಸುಮಾರು 25 ಕ್ಕೂ ಹೆಚ್ಚು ಜನರನ್ನು ತಕ್ಷಣವೇ ಕಾಸಾ ಉಪ-ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಪೊಲೀಸ್ ತನಿಖೆ: ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪಂಚನಾಮೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅತಿ ವೇಗ ಮತ್ತು ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಪ್ರಾಥಮಿಕ ಕಾರಣ ಎಂದು ಶಂಕಿಸಲಾಗಿದೆ. ಇದರೊಂದಿಗೆ ಮದುವೆ ಜನ ಇದ್ದ ವಾಹನದಲ್ಲಿ ಮಿತಿಮೀರಿ ಜನರನ್ನು ತುಂಬಿಸಲಾಗಿತ್ತೇ ಎಂಬ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಭೀಕರ ಅಪಘಾತದಿಂದಾಗಿ ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ವ್ಯತ್ಯಯವಾಗಿತ್ತು.
ಖುಷಿಯಿಂದ ಮದುವೆಗೆ ಹೊರಟಿದ್ದ ಕುಟುಂಬಗಳಲ್ಲಿ ಈ ದುರಂತವು ತೀವ್ರ ಶೋಕವನ್ನು ತಂದೊಡ್ಡಿದೆ.