ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ಬಿಧಾನನಗರದಲ್ಲಿರುವ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಕಚೇರಿಯಿಂದ ಭಾರಿ ಪ್ರಮಾಣದ ಆಧಾರ್ ಕಾರ್ಡ್‌ಗಳು ಪತ್ತೆಯಾಗಿದ್ದು, ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಧಾನನಗರ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಬಿಧಾನನಗರದ ವಾರ್ಡ್ ಸಂಖ್ಯೆ 36ಕ್ಕೆ ಒಳಪಡುವ ಬಾಸಂತಿ ದೇವಿ ಕಾಲೋನಿಯಲ್ಲಿರುವ ಟಿಎಂಸಿ ಪಕ್ಷದ ಕಚೇರಿಯಲ್ಲಿ 50ಕ್ಕೂ ಹೆಚ್ಚು ಆಧಾರ್ ಕಾರ್ಡ್‌ಗಳು ಹಾಗೂ ಪ್ರಮುಖ ಭೂ ದಾಖಲೆಗಳು (Land Documents) ಪತ್ತೆಯಾಗಿವೆ. ರಾಜಕೀಯ ಪಕ್ಷವೊಂದರ ಸ್ಥಳೀಯ ಕಚೇರಿಯಲ್ಲಿ ಇಷ್ಟೊಂದು ಸಾರ್ವಜನಿಕರ ಅಧಿಕೃತ ಗುರುತಿನ ಚೀಟಿಗಳು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಆಧಾರ್ ಕಾರ್ಡ್‌ಗಳು ಪತ್ತೆಯಾದ ಬೆನ್ನಲ್ಲೇ ಸ್ಥಳೀಯ ನಿವಾಸಿಗಳು ಹಾಗೂ ವಿರೋಧ ಪಕ್ಷವಾದ ಬಿಜೆಪಿ ಕಾರ್ಯಕರ್ತರು ಟಿಎಂಸಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರ ಪ್ರಕಾರ, “ನಮಗೆ ಚುನಾವಣೆಗಳಲ್ಲಿ ಮತ ಚಲಾಯಿಸಲು ಬಿಡುತ್ತಿರಲಿಲ್ಲ. ಪೋಸ್ಟ್‌ಮ್ಯಾನ್ (ಪಿಯೋನ್) ಮೂಲಕ ಮನೆಗಳಿಗೆ ತಲುಪಬೇಕಾಗಿದ್ದ ಸಾಮಾನ್ಯ ಸಾರ್ವಜನಿಕರ ಆಧಾರ್ ಕಾರ್ಡ್‌ಗಳನ್ನು ಟಿಎಂಸಿ ನಾಯಕರು ಮಧ್ಯದಲ್ಲೇ ಕಸಿದುಕೊಂಡು ತಮ್ಮ ಕಚೇರಿಯಲ್ಲಿ ಇಟ್ಟುಕೊಳ್ಳುತ್ತಿದ್ದರು” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಆಧಾರ್ ಕಾರ್ಡ್‌ಗಳ ಜೊತೆಗೆ ಸರ್ಕಾರಿ ಭೂಮಿಗೆ ಸಂಬಂಧಿಸಿದ ದಾಖಲೆಗಳು ಸಿಕ್ಕಿರುವುದರಿಂದ, ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಕೆ ಮಾಡಲು ಇವುಗಳನ್ನು ಬಳಸಲಾಗುತ್ತಿತ್ತೇ ಎಂಬ ಶಂಕೆ ವ್ಯಕ್ತವಾಗಿದೆ.








