ಅಹಮದಾಬಾದ್:ದೇಶದ ಪ್ರಮುಖ ಉದ್ಯಮಿ, ಅದಾನಿ ಗ್ರೂಪ್‌ನ ಮುಖ್ಯಸ್ಥ ಗೌತಮ್ ಅದಾನಿ ಅವರು ಬಿಹಾರದಲ್ಲಿ ₹150 ಕೋಟಿ ವೆಚ್ಚದ ಬೃಹತ್ ‘ಗ್ರಾಮೀಣ ನೇತ್ರ ಆರೈಕೆ’ (Rural Vision Care Initiative) ಯೋಜನೆಗೆ ಚಾಲನೆ ನೀಡಿದ್ದಾರೆ. ಬಿಹಾರದ ಗ್ರಾಮೀಣ ಭಾಗದ ಜನರಿಗೆ ಅತ್ಯಾಧುನಿಕ ಮತ್ತು ಉಚಿತ ಕಣ್ಣಿನ ಚಿಕಿತ್ಸೆ ಒದಗಿಸುವ ಉದ್ದೇಶದ ಈ ಯೋಜನೆಯು, ವಾರ್ಷಿಕವಾಗಿ ಬರೋಬ್ಬರಿ 3.3 ಲಕ್ಷ ಕಣ್ಣಿನ ಶಸ್ತ್ರಚಿಕಿತ್ಸೆಗಳನ್ನು ಮಾಡುವ ಸಾಮರ್ಥ್ಯ ಹೊಂದಿದೆ. ಇದೇ ವೇಳೆ, ಈ ಅಭಿಯಾನವನ್ನು ದೇಶಾದ್ಯಂತ ವಿಸ್ತರಿಸಲು ಹೆಚ್ಚುವರಿಯಾಗಿ ₹500 ಕೋಟಿ ನೀಡುವುದಾಗಿ ಗೌತಮ್ ಅದಾನಿ ಪ್ರಕಟಿಸಿದ್ದಾರೆ.
ಈ ಉಪಕ್ರಮದ ಅಡಿಯಲ್ಲಿ ಬಿಹಾರದ ವಿವಿಧ ಜಿಲ್ಲೆಗಳಲ್ಲಿ ಉನ್ನತ ತಂತ್ರಜ್ಞಾನದ ಕಣ್ಣಿನ ಆಸ್ಪತ್ರೆಗಳು ಮತ್ತು ಮೊಬೈಲ್ ಹೆಲ್ತ್ ಯೂನಿಟ್‌ಗಳನ್ನು ಸ್ಥಾಪಿಸಲಾಗುತ್ತಿದ್ದು, ಪ್ರತಿ ವರ್ಷ ಲಕ್ಷಾಂತರ ಬಡ ಹಾಗೂ ಗ್ರಾಮೀಣ ಜನರಿಗೆ ಉಚಿತವಾಗಿ ನೇತ್ರ ಶಸ್ತ್ರಚಿಕಿತ್ಸೆ ಒದಗಿಸಲಾಗುತ್ತದೆ.
ಮೊದಲ ಹಂತದಲ್ಲಿ ಬಿಹಾರದಲ್ಲಿ ಈ ಯೋಜನೆಯ ಮೂಲಸೌಕರ್ಯ ಮತ್ತು ಉಚಿತ ವೈದ್ಯಕೀಯ ಶಿಬಿರಗಳಿಗಾಗಿ ಅದಾನಿ ಫೌಂಡೇಶನ್ ₹150 ಕೋಟಿ ವಿನಿಯೋಗಿಸುತ್ತಿದೆ.
ಬಿಹಾರದ ಯಶಸ್ಸಿನ ಬಳಿಕ, ಭಾರತದ ಇತರ ಹಿಂದುಳಿದ ಗ್ರಾಮೀಣ ಪ್ರದೇಶಗಳಿಗೂ ಉಚಿತ ಕಣ್ಣಿನ ಚಿಕಿತ್ಸೆ ತಲುಪಿಸಲು ಗೌತಮ್ ಅದಾನಿ ಹೆಚ್ಚುವರಿಯಾಗಿ ₹500 ಕೋಟಿ ಧನಸಹಾಯವನ್ನು ಘೋಷಿಸಿದ್ದಾರೆ.








