ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು (KSRTC, BMTC, NWKRTC, KKRTC) ರಾಜ್ಯದ ರಕ್ತನಾಳಗಳಿದ್ದಂತೆ. ಪ್ರತಿದಿನ ಲಕ್ಷಾಂತರ ಜನಸಾಮಾನ್ಯರನ್ನು, ವಿದ್ಯಾರ್ಥಿಗಳನ್ನು, ದುಡಿಯುವ ಮಹಿಳೆಯರನ್ನು ಸುರಕ್ಷಿತವಾಗಿ ಗುರಿ ಮುಟ್ಟಿಸುವಲ್ಲಿ ಈ ಸಂಸ್ಥೆಗಳ ಪಾತ್ರ ಅನನ್ಯವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಸಾರಿಗೆ ಸಂಸ್ಥೆಗಳು ಎದುರಿಸುತ್ತಿರುವ ಆರ್ಥಿಕ ಸವಾಲುಗಳು, ನೌಕರರ ವೇತನ ಪರಿಷ್ಕರಣೆಯ ಬೇಡಿಕೆಗಳು ಮತ್ತು ಸಂಸ್ಥೆಯ ಸುಸ್ಥಿರತೆಯ ನಡುವಿನ ಸಮತೋಲನ ಕಾಯ್ದುಕೊಳ್ಳುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. “ಸಾರಿಗೆ ಇಲಾಖೆ ಹಾಗೂ ನಾಲ್ಕು ಸಾರಿಗೆ ನಿಗಮಗಳ ಬಗ್ಗೆ ನಿಮಗೆಷ್ಟು ಗೊತ್ತು?” ಎಂಬ ಪ್ರಶ್ನೆಯೊಂದಿಗೆ ಪ್ರಸ್ತುತ ಆರ್ಥಿಕ ಪರಿಸ್ಥಿತಿ ಮತ್ತು ಭವಿಷ್ಯದ ಮುನ್ನೋಟದ ಕುರಿತು ಸಾರ್ವಜನಿಕರು ಹಾಗೂ ನೌಕರರು ಆಳವಾಗಿ ಯೋಚಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಹಾಗಾದರೆ ಸಾರಿಗೆ ನೌಕರರೇ ನೀವು ಪ್ರತಿಭಟನೆಗೂ ಮುನ್ನ ಈ ಸುದ್ದಿ ಓದಿ.
ಪ್ರಸ್ತುತ ವೇತನ ಪರಿಷ್ಕರಣೆ ಮತ್ತು ಸರ್ಕಾರದ ಐತಿಹಾಸಿಕ ತೀರ್ಮಾನ
ಸಾರಿಗೆ ನೌಕರರ ಕ್ಷೇಮಾಭಿವೃದ್ಧಿಗೆ ಸರ್ಕಾರವು ಬದ್ಧವಾಗಿದ್ದು, ದಿನಾಂಕ 01/04/2025 ರಿಂದ ಜಾರಿಗೆ ಬರುವಂತೆ ಶೇಕಡಾ 12.5 ರಷ್ಟು ವೇತನ ಪರಿಷ್ಕರಣೆ ಮಾಡಿ ಈಗಾಗಲೇ ಆದೇಶ ಹೊರಡಿಸಿದೆ. ಈ ನಿರ್ಧಾರವು ನಾಲ್ಕೂ ನಿಗಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 1 ಲಕ್ಷದ 5 ಸಾವಿರ ಖಾಯಂ ಸಿಬ್ಬಂದಿಗಳಿಗೆ ಅನ್ವಯವಾಗುತ್ತದೆ.
ಆದರೆ, ಈ 12.5% ವೇತನ ಪರಿಷ್ಕರಣೆಯಿಂದಾಗಿ ಸಾರಿಗೆ ಸಂಸ್ಥೆಗಳ ಮೇಲೆ ಬೀಳುತ್ತಿರುವ ಹೆಚ್ಚುವರಿ ಆರ್ಥಿಕ ಹೊರೆ ಸಣ್ಣದೇನಲ್ಲ:
- ಮಾಸಿಕ ಹೆಚ್ಚುವರಿ ವೆಚ್ಚ: ರೂ. 72.80 ಕೋಟಿ
- ವಾರ್ಷಿಕ ಹೆಚ್ಚುವರಿ ವೆಚ್ಚ: ರೂ. 873.64 ಕೋಟಿ
ಇಷ್ಟೇ ಅಲ್ಲದೆ, ನೌಕರರ ಹಿತರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು, ಈಗಾಗಲೇ 2023 ರ ಮಾರ್ಚ್ ತಿಂಗಳ ವೇತನ ಪರಿಷ್ಕರಣೆಯ 26 ತಿಂಗಳ ಹಿಂಬಾಕಿ (Arrears) ಮೊತ್ತವಾದ ಒಟ್ಟು ರೂ. 1,271.92 ಕೋಟಿಗಳಲ್ಲಿ, ಮೊದಲ ಕಂತಿನ ರೂಪದಲ್ಲಿ ರೂ. 450 ಕೋಟಿಯನ್ನು ಸರ್ಕಾರವು ಬಿಡುಗಡೆ ಮಾಡಿದೆ. ಈ ಮೊತ್ತವನ್ನು ಈಗಾಗಲೇ ನೌಕರರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗಿದೆ. ಇದು ನೌಕರರ ಆರ್ಥಿಕ ಭದ್ರತೆಗೆ ಸರ್ಕಾರ ನೀಡಿರುವ ಆದ್ಯತೆಯನ್ನು ತೋರಿಸುತ್ತದೆ.
ಕಾರ್ಮಿಕ ಸಂಘಟನೆಗಳ 25% ವೇತನ ಹೆಚ್ಚಳದ ಬೇಡಿಕೆ ಮತ್ತು ಅದರ ಆರ್ಥಿಕ ಪರಿಣಾಮ
ಕಾರ್ಮಿಕ ಸಂಘಟನೆಗಳು ಪ್ರಸ್ತುತ ಶೇಕಡಾ 25 ರಷ್ಟು ವೇತನ ಪರಿಷ್ಕರಣೆ ಮಾಡಬೇಕೆಂದು ಪಟ್ಟು ಹಿಡಿದಿವೆ. ಪ್ರಜಾಪ್ರಭುತ್ವದಲ್ಲಿ ಬೇಡಿಕೆಗಳನ್ನು ಇಡುವುದು ಹಕ್ಕಾಗಿದ್ದರೂ, ಈ ಬೇಡಿಕೆಯು ಸಂಸ್ಥೆಯ ಅಸ್ತಿತ್ವಕ್ಕೆ ತರಬಲ್ಲ ಆರ್ಥಿಕ ಆಘಾತವನ್ನು ನಾವು ಅಂಕಿ-ಅಂಶಗಳ ಮೂಲಕ ಅರ್ಥಮಾಡಿಕೊಳ್ಳಬೇಕಿದೆ.
ಒಂದು ವೇಳೆ ಕಾರ್ಮಿಕ ಸಂಘಟನೆಗಳ ಬೇಡಿಕೆಯಂತೆ 25% ವೇತನ ಪರಿಷ್ಕರಣೆ ಮಾಡಿದ್ದೇ ಆದಲ್ಲಿ, ನಾಲ್ಕು ಸಾರಿಗೆ ಸಂಸ್ಥೆಗಳು ಭರಿಸಬೇಕಾದ ಹೆಚ್ಚುವರಿ ವೆಚ್ಚದ ವಿವರ ಹೀಗಿದೆ:
- ಪ್ರತಿ ತಿಂಗಳಿಗೆ: ರೂ. 131.52 ಕೋಟಿ
- ಪ್ರತಿ ವರ್ಷಕ್ಕೆ (ವಾರ್ಷಿಕ): ರೂ. 1,578.18 ಕೋಟಿ
- ನಾಲ್ಕು ವರ್ಷಗಳ ಅವಧಿಗೆ: ರೂ. 6,312.23 ಕೋಟಿ
ಚಿಂತಿಸಬೇಕಾದ ವಿಷಯ: “ಮೂರು ದಿನ ಮೃಷ್ಟಾನ್ನ ಭೋಜನ ಮಾಡಿ, ನೂರು ದಿನ ಹಸಿವಿನಿಂದ ಇರಲು ಸಾಧ್ಯವೇ?” ಸಂಸ್ಥೆಗೆ ಬರುವ ಆದಾಯವನ್ನೆಲ್ಲಾ ಕೇವಲ ವೇತನ ಮತ್ತು ಡೀಸೆಲ್ ಪಾವತಿಗೇ ವ್ಯಯಿಸಿದರೆ, ಸಂಸ್ಥೆಯು ಭವಿಷ್ಯದಲ್ಲಿ ಬೆಳೆಯುವುದು ಹೇಗೆ? ಹೊಸ ಬಸ್ಸುಗಳ ಖರೀದಿ, ಹೊಸ ತಂತ್ರಜ್ಞಾನದ ಅಳವಡಿಕೆಗೆ ಎಲ್ಲಿಂದ ತರಬೇಕು? ಎಂಬ ಯಕ್ಷಪ್ರಶ್ನೆ ಎದುರಾಗುತ್ತದೆ.
ಸಾರಿಗೆ ನಿಗಮಗಳ ಪ್ರಸ್ತುತ ಆದಾಯ ಮತ್ತು ವೆಚ್ಚದ ಕ್ರೂರ ವಾಸ್ತವ
ಸಾರಿಗೆ ಸಂಸ್ಥೆಗಳ ಒಟ್ಟು ಆದಾಯದಲ್ಲಿ ಸಿಂಹಪಾಲು ವೆಚ್ಚವಾಗುತ್ತಿರುವುದು ನೌಕರರ ಸಿಬ್ಬಂದಿ ವೆಚ್ಚ ಮತ್ತು ಇಂಧನಕ್ಕಾಗಿ ಮಾತ್ರ. ಪ್ರಸ್ತುತ ಅಂಕಿ-ಅಂಶಗಳ ಪ್ರಕಾರ ಪ್ರತಿ ವರ್ಷ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ:
- ಸಿಬ್ಬಂದಿ ವೆಚ್ಚ (46.31%): ರೂ. 6,759.78 ಕೋಟಿ
- ಡೀಸೆಲ್/ಇಂಧನ ವೆಚ್ಚ (32.51%): ರೂ. 4,744.38 ಕೋಟಿ
ಅಂದರೆ, ಸಂಸ್ಥೆಯ ಒಟ್ಟು ವೆಚ್ಚದ ಸರಿಸುಮಾರು 78.82% ಭಾಗ ಕೇವಲ ಸಂಬಳ ಮತ್ತು ಡೀಸೆಲ್ಗೇ ಮುಗಿದುಹೋಗುತ್ತದೆ. ಇದರೊಂದಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿನ ರಾಜಕೀಯ ಅನಿಶ್ಚಿತತೆಯಿಂದಾಗಿ ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸಂಸ್ಥೆಯನ್ನು ಲಾಭದಾಯಕವಾಗಿ ನಡೆಸುವುದು ಕತ್ತಿಯ ಮೇಲಿನ ನಡಿಗೆಯಾಗಿದೆ.
ಹೊರರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಸಾರಿಗೆ ನೌಕರರ ಸ್ಥಿತಿ
ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಸರ್ಕಾರವು ತನ್ನ ಸಾರಿಗೆ ನೌಕರರನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಳ್ಳುತ್ತಿದೆ. ಉದಾಹರಣೆಗೆ, ದೇಶದ ದೊಡ್ಡ ರಾಜ್ಯವಾದ ಉತ್ತರ ಪ್ರದೇಶ ರಸ್ತೆ ಸಾರಿಗೆ ಸಂಸ್ಥೆಯನ್ನು (UPSRTC) ಗಮನಿಸಿದರೆ, ಅಲ್ಲಿ ಅಂದಾಜು 40,000 ಸಿಬ್ಬಂದಿಗಳಿದ್ದಾರೆ. ಆದರೆ ಆಶ್ಚರ್ಯಕರ ಸಂಗತಿಯೆಂದರೆ, ಅದರಲ್ಲಿ ಶೇಕಡಾ 90 ರಷ್ಟು ನೌಕರರು ಹೊರಗುತ್ತಿಗೆ (Outsourcing) ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ.
ಆದರೆ ನಮ್ಮ ಕರ್ನಾಟಕದಲ್ಲಿ ಒಟ್ಟು ಇಲಾಖೆಯ ಬಲ 1.05 ಲಕ್ಷವಾಗಿದ್ದು, ಇವರೆಲ್ಲರೂ ಖಾಯಂ ನೌಕರರು ಎಂಬುದನ್ನು ನೌಕರ ಬಾಂಧವರು ಮರೆಯಬಾರದು. ಖಾಯಂ ನೌಕರರಿಗೆ ಸಿಗುವ ಭವಿಷ್ಯ ನಿಧಿ, ಗ್ರಾಚ್ಯುಟಿ, ವೈದ್ಯಕೀಯ ಸೌಲಭ್ಯಗಳು ಮತ್ತು ಉದ್ಯೋಗ ಭದ್ರತೆ ಹೊರಗುತ್ತಿಗೆ ನೌಕರರಿಗೆ ಸಿಗುವುದಿಲ್ಲ. ಇಷ್ಟು ದೊಡ್ಡ ಪ್ರಮಾಣದ ಖಾಯಂ ಸಿಬ್ಬಂದಿಯನ್ನು ರಕ್ಷಿಸುತ್ತಾ ಸಂಸ್ಥೆಯನ್ನು ಮುನ್ನಡೆಸುತ್ತಿರುವುದು ಕರ್ನಾಟಕದ ಹೆಮ್ಮೆಯಾಗಿದೆ.
ಸಾರಿಗೆ ಸಂಸ್ಥೆಗಳ ವರ್ಷಾವಾರು ನಷ್ಟದ ಆತಂಕಕಾರಿ ಅಂಕಿ-ಅಂಶಗಳು
ಕಳೆದ ಕೆಲವು ವರ್ಷಗಳಿಂದ ನಾಲ್ಕೂ ಸಾರಿಗೆ ಸಂಸ್ಥೆಗಳು ಸತತವಾಗಿ ಕೋಟ್ಯಂತರ ರೂಪಾಯಿಗಳ ನಷ್ಟವನ್ನು ಅನುಭವಿಸುತ್ತಾ ಬಂದಿವೆ. ವರ್ಷಾವಾರು ಲಾಭ-ನಷ್ಟದ (ಕೋಟಿ ರೂಪಾಯಿಗಳಲ್ಲಿ) ವಿವರ ಇಲ್ಲಿದೆ:
|
ಆರ್ಥಿಕ ವರ್ಷ |
ನಷ್ಟದ ವಿವರ (ರೂ. ಕೋಟಿಗಳಲ್ಲಿ) |
|---|---|
|
2018-19 |
– 641.72 |
|
2019-20 |
– 982.62 |
|
2020-21 |
– 1320.88 |
|
2021-22 |
– 1289.96 |
|
2022-23 |
– 261.41 |
|
2023-24 |
– 1354.48 |
|
2024-25 |
– 842.82 |
ದಿನಾಂಕ 31.03.2026 ರ ಅನ್ವಯ ನಾಲ್ಕು ಸಾರಿಗೆ ಸಂಸ್ಥೆಗಳ ಒಟ್ಟು ಬಾಕಿ ಹೊಣೆಗಾರಿಕೆ ರೂ. 7,130.80 ಕೋಟಿಗಳಷ್ಟಿದೆ! ಇದರಲ್ಲಿ ನೌಕರರ ಭವಿಷ್ಯ ನಿಧಿ (PF) ಬಾಕಿಯೇ ರೂ. 2,298.20 ಕೋಟಿಗಳಾಗಿದ್ದು, ಇಂಧನ ಪಾವತಿ (Diesel dues) ಬಾಕಿ ರೂ. 822.26 ಕೋಟಿಗಳಷ್ಟಿದೆ. ಈ ಭೀಕರ ಆರ್ಥಿಕ ಪರಿಸ್ಥಿತಿಯಲ್ಲಿ ಸಂಸ್ಥೆಗಳು ಉಸಿರಾಡುತ್ತಿವೆ.
ಸ್ವಾಯತ್ತತೆಯ ಪ್ರಶ್ನೆ ಮತ್ತು ಸರ್ಕಾರದ ಮಿತಿಗಳು
ಸಾರಿಗೆ ಸಂಸ್ಥೆಗಳು ರಸ್ತೆ ಸಾರಿಗೆ ನಿಗಮಗಳ ಕಾಯ್ದೆ (Road Transport Corporation Act) ಪ್ರಕಾರ ಅಸ್ತಿತ್ವಕ್ಕೆ ಬಂದಿರುವ ಸ್ವಾಯತ್ತ ಸಂಸ್ಥೆಗಳಾಗಿವೆ (Autonomous Bodies). ಕಾಯ್ದೆಯ ನಿಯಮಾವಳಿಗಳ ಪ್ರಕಾರ, ಆಯಾ ಸಂಸ್ಥೆಗಳ ಆದಾಯ ಮತ್ತು ಖರ್ಚು ನಿರ್ವಹಣೆಯ ಸಂಪೂರ್ಣ ಹೊಣೆಗಾರಿಕೆ ಆಯಾ ನಿಗಮಗಳದ್ದೇ ಆಗಿರುತ್ತದೆ.
ಸರ್ಕಾರವು ಕಷ್ಟದ ಸಮಯದಲ್ಲಿ ಸಂಸ್ಥೆಗಳಿಗೆ ಆರ್ಥಿಕ ಸಹಾಯ ಅಥವಾ ಸಬ್ಸಿಡಿ ಮಾಡಬಹುದೇ ಹೊರತು, ನೌಕರರ ಸಂಪೂರ್ಣ ವೇತನ ಪಾವತಿಯನ್ನು ಸರ್ಕಾರವೇ ಭರಿಸಬೇಕೆಂಬ ಬೇಡಿಕೆ ಕಾನೂನಾತ್ಮಕವಾಗಿ ಮತ್ತು ಆರ್ಥಿಕವಾಗಿ ಎಷ್ಟು ಸರಿ? ಕೇವಲ ಸರ್ಕಾರದಿಂದಲೇ ಸಂಪೂರ್ಣವಾಗಿ ಇಂತಹ ಸ್ವಾಯತ್ತ ಸಂಸ್ಥೆಗಳನ್ನು ನಡೆಸುವುದು ರಸ್ತೆ ಸಾರಿಗೆ ನಿಗಮದ ದೈನಂದಿನ ಹಣಕಾಸು, ವೇತನವನ್ನು ಸರ್ಕಾರವೇ ಪೂರೈಸಲು ಸಾಧ್ಯವಿಲ್ಲ. ಅದು ಅಸಾಧ್ಯದ ಮಾತು.
ಹೊರಗಿನ ನಾಯಕತ್ವ ಮತ್ತು ಮುಷ್ಕರಗಳ ದುಷ್ಪರಿಣಾಮ
ಇಂದು ಸಾರಿಗೆ ಸಂಸ್ಥೆಗಳ ನೌಕರ ಸಂಘಟನೆಗಳ ನಾಯಕತ್ವವನ್ನು ಗಮನಿಸಿದರೆ ಒಂದು ಕಹಿ ಸತ್ಯ ಹೊರಬರುತ್ತದೆ. ನೌಕರರನ್ನು ಮುನ್ನಡೆಸುತ್ತಿರುವ ಬಹುತೇಕ ನಾಯಕರು ಸಂಸ್ಥೆಯ ಹೊರಗಿನವರು, ಇಲ್ಲವೇ ನಿವೃತ್ತಿ ಹೊಂದಿದವರು ಅಥವಾ ಶಿಸ್ತು ಉಲ್ಲಂಘನೆಗಾಗಿ ಸಂಸ್ಥೆಯಿಂದ ವಜಾಗೊಂಡಿರುವವರಾಗಿದ್ದಾರೆ.
ಇಂತಹ ನಾಯಕರಿಗೆ ಪ್ರಸ್ತುತ ಸೇವೆಯಲ್ಲಿರುವ ನೌಕರರ ನಿಜವಾದ ನಾಡಿಮಿಡಿತ ಅಥವಾ ಆರ್ಥಿಕ ಸಂಕಷ್ಟಗಳು ಅರ್ಥವಾಗುತ್ತಿಲ್ಲ. ಅವರು ನೌಕರರನ್ನು ಭಾವನಾತ್ಮಕವಾಗಿ ಪ್ರಚೋದಿಸಿ, ಮುಷ್ಕರದ ಹಾದಿ ಹಿಡಿಯುವಂತೆ ಮಾಡುತ್ತಾರೆ. ಇದರ ಪರಿಣಾಮವಾಗಿ ಅಮಾಯಕ ನೌಕರರು ಅಮಾನತು (Suspension), ವಜಾ (Dismissal) ಮತ್ತು ಕೋರ್ಟ್-ಕಚೇರಿ ಅಲೆಯುವಂತಾಗುತ್ತದೆ. ಆದರೆ ನಾಯಕರು ಮಾತ್ರ ತಮ್ಮ ಸ್ವಾರ್ಥಕ್ಕಾಗಿ ‘ಲೀಡರ್ ಗಿರಿ’ ಮಾಡುತ್ತಾ ತಿರುಗಾಡುತ್ತಿದ್ದರೇ, ನೌಕರರ ಕುಟುಂಬಗಳು ಬೀದಿಗೆ ಬೀಳುತ್ತಿವೆ.
ಸಾರ್ವಜನಿಕರ ಮೇಲಾಗುವ ಪರಿಣಾಮಗಳು
ಮುಷ್ಕರಗಳು ಕೇವಲ ಸಂಸ್ಥೆಯ ಮೇಲಷ್ಟೇ ಅಲ್ಲ, ಇಡೀ ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ:
- ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ: ಮೇ.18 ರಿಂದ ಎಸ್‌ಎಸ್‌ಎಲ್‌ಸಿ (SSLC) ಮತ್ತು ಇತರ ಪ್ರಮುಖ ಪರೀಕ್ಷೆಗಳು ನಡೆಯುತ್ತಿವೆ. ಇಂತಹ ಸಮಯದಲ್ಲಿ ಮುಷ್ಕರ ಮಾಡಿದರೆ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ತಲುಪುವುದು ಹೇಗೆ? ಅವರ ಭವಿಷ್ಯಕ್ಕೆ ಯಾರು ಹೊಣೆ?
- ಶಕ್ತಿ ಯೋಜನೆಗೆ ಅಡಚಣೆ: ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಯೋಜನೆಯಡಿ ಲಕ್ಷಾಂತರ ಮಹಿಳೆಯರು ಪ್ರತಿದಿನ ಉದ್ಯೋಗ, ಆಸ್ಪತ್ರೆ ಹಾಗೂ ಕೌಟುಂಬಿಕ ಕೆಲಸ ಕಾರ್ಯಗಳಿಗಾಗಿ ಉಚಿತವಾಗಿ ಬಸ್ಸುಗಳನ್ನು ಅವಲಂಬಿಸಿದ್ದಾರೆ. ಮುಷ್ಕರದಿಂದಾಗಿ ಅವರ ದೈನಂದಿನ ಬದುಕಿಗೆ ತೀವ್ರ ಅಡಚಣೆಯಾಗುತ್ತದೆ.
- ಭವಿಷ್ಯದ ಆತಂಕ: ಜಾಗತಿಕವಾಗಿ ಮತ್ತೊಂದು ಕೋವಿಡ್ ಮಾದರಿಯ ಕಠಿಣ ಪರಿಸ್ಥಿತಿ ಉದ್ಭವಿಸಬಹುದಾದ ದಿನಗಳಲ್ಲಿ ನಾವಿದ್ದೇವೆ. ಇಂತಹ ಅನಿಶ್ಚಿತತೆಯ ಸಮಯದಲ್ಲಿ ಸಾರ್ವಜನಿಕ ಸಾರಿಗೆಯನ್ನು ಸ್ಥಗಿತಗೊಳಿಸುವುದು ಸೂಕ್ತವಲ್ಲ.
“ಮುಷ್ಕರ ಒಂದೇ ಎಲ್ಲದಕ್ಕೂ ಪರಿಹಾರವಲ್ಲ”. ಸಾರಿಗೆ ಸಂಸ್ಥೆಗಳು ಉಳಿದರೆ ಮಾತ್ರ ನೌಕರರ ಭವಿಷ್ಯ ಮತ್ತು ಸಾರ್ವಜನಿಕರ ಸೇವೆ ಸಾಧ್ಯ. ನೌಕರರ ಹಿತವನ್ನು ಕಾಯಲು ಈಗಾಗಲೇ ಸರ್ಕಾರ 12.5% ವೇತನ ಹೆಚ್ಚಳ ಮಾಡಿದ್ದು, ಹಿಂಬಾಕಿಯನ್ನೂ ಬಿಡುಗಡೆ ಮಾಡಿದೆ. ಪ್ರಸ್ತುತ ಸಂಸ್ಥೆ ಎದುರಿಸುತ್ತಿರುವ ರೂ. 7,130.80 ಕೋಟಿಗಳ ಭಾರಿ ಸಾಲದ ಹೊರೆಯನ್ನು ಗಮನದಲ್ಲಿಟ್ಟುಕೊಂಡು, ನೌಕರರು ಮತ್ತು ಕಾರ್ಮಿಕ ಸಂಘಟನೆಗಳು ಹಠಮಾರಿ ಧೋರಣೆಯನ್ನು ಬಿಡಬೇಕಿದೆ. ಸಂಸ್ಥೆಯ ಸುಸ್ಥಿರತೆ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಲು ಮುಷ್ಕರದ ಹಾದಿ ಬಿಟ್ಟು, ಕರ್ತವ್ಯಕ್ಕೆ ಹಾಜರಾಗುವ ಮೂಲಕ ಸಂಸ್ಥೆಯನ್ನು ಮತ್ತು ತಮ್ಮ ಕುಟುಂಬಗಳನ್ನು ಆರ್ಥಿಕ ಸಂಕಷ್ಟದಿಂದ ರಕ್ಷಿಸಿಕೊಳ್ಳಬೇಕಾಗಿದೆ.








