ಬೆಂಗಳೂರಿನಲ್ಲಿ ಗ್ರಾಮೀಣ ಅಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು “ಪೆಟ್ರೋಲ್ ಅನ್ನು ಮಿತವಾಗಿ ಬಳಸುವುದು ಚಿನ್ನ ಖರೀದಿಸಿದಂತೆ” ಎಂದು ನೀಡಿದ್ದಾರೆ ಎನ್ನಲಾದ ಕರೆಯನ್ನು ಉಲ್ಲೇಖಿಸಿ ಟೀಕಿಸಿರುವ ಖರ್ಗೆ, ಇತ್ತೀಚೆಗೆ ಬಿಜೆಪಿ ನಾಯಕರು ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿರುವುದು ಕೇವಲ ಒಂದು ದಿನದ ನಾಟಕವಷ್ಟೆ ಎಂದು ಲೇವಡಿ ಮಾಡಿದ್ದಾರೆ.
ಬಿಜೆಪಿ ನಾಯಕರ ಈ ದಿಢೀರ್ ಮೆಟ್ರೋ ಪ್ರಯಾಣವನ್ನು ಕೇವಲ ಪ್ರದರ್ಶನ ಎಂದು ಕರೆದಿರುವ ಸಚಿವರು, “ಬಿಜೆಪಿ ನಾಯಕರು ಪ್ರತಿದಿನ ಮೆಟ್ರೋದಲ್ಲಿ ಓಡಾಡುವುದಾದರೆ ನಾವು ಅದನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಅವರದ್ದು ಕೇವಲ ಒಂದು ದಿನದ ನಾಟಕವಷ್ಟೇ. ಒಬ್ಬ ಮಂತ್ರಿ ಮೆಟ್ರೋ ಹತ್ತುವುದು, ಮತ್ತೊಬ್ಬರು ಬೈಕ್ ಹತ್ತಿ ಫೋಟೋಗೆ ಫೋಸ್ ಕೊಡುವುದು ಬಿಜೆಪಿಯವರ ಹಳೇ ಚಾಳಿ” ಎಂದು ಲೇವಡಿ ಮಾಡಿದರು.
ಮುಂದುವರಿದು ಮಾತನಾಡಿದ ಪ್ರಿಯಾಂಕ್ ಖರ್ಗೆ, ಬಿಜೆಪಿ ನಾಯಕರಿಗೆ ನಿಜವಾಗಿಯೂ ಜನಸಾಮಾನ್ಯರ ಕಾಳಜಿ ಇದ್ದರೆ ಪ್ರತಿದಿನ ಬಿಎಂಟಿಸಿ ಬಸ್ಸುಗಳಲ್ಲಿ ಪ್ರಯಾಣಿಸಲಿ ಎಂದು ಸವಾಲು ಹಾಕಿದರು. ಅಲ್ಲದೆ, ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಯೋಜನೆಯನ್ನು ಬಿಜೆಪಿ ನಾಯಕರು ಸಮರ್ಪಕವಾಗಿ ಬಳಸಿಕೊಳ್ಳಲಿ ಎಂದು ಅವರು ಈ ಸಂದರ್ಭದಲ್ಲಿ ಸಲಹೆ ನೀಡಿದರು.
ಇದೇ ವೇಳೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಮೆಟ್ರೋ ಪ್ರಯಾಣವನ್ನು ಉಲ್ಲೇಖಿಸಿ ಪ್ರಶ್ನೆಗಳ ಸುರಿಮಳೆಗೈದ ಸಚಿವರು, “ಪ್ರಶ್ನೆ ಇರೋದು ವಿಜಯೇಂದ್ರ ಅವರು ಮೆಟ್ರೋ ಹತ್ತುವಂತೆ ಮಾಡಿದ್ದು ಯಾರು? ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಮೆಟ್ರೋ ಹತ್ತುವ ಪರಿಸ್ಥಿತಿ ಯಾಕೆ ಬಂತು? ಅವರನ್ನು ಮೆಟ್ರೋ ಹತ್ತುವಂತೆ ಮಾಡಿದವರು ಯಾರು? ಇದಕ್ಕೆಲ್ಲಾ ಬಿಜೆಪಿ ನಾಯಕರು ಮೊದಲು ಉತ್ತರ ನೀಡಬೇಕಲ್ವಾ?” ಎಂದು ಖಾರವಾಗಿ ಪ್ರಶ್ನಿಸಿದರು.








