ಬೆಂಗಳೂರು: ರಾಜ್ಯದ ಮದ್ಯ ಪ್ರಿಯರಿಗೆ ಸರ್ಕಾರ ಮತ್ತೊಂದು ಬಿಗ್ ಶಾಕ್ ನೀಡಿದೆ. ಕಳೆದೆರಡು ದಿನಗಳಿಂದ ಕೇಳಿಬರುತ್ತಿದ್ದ ಮದ್ಯದ ದರ ಏರಿಕೆ ವದಂತಿಗಳಿಗೆ ಇದೀಗ ಅಧಿಕೃತ ಮುದ್ರೆ ಬಿದ್ದಿದ್ದು, ರಾಜ್ಯದಲ್ಲಿ ನೂತನ ಅಬಕಾರಿ ಸುಂಕ ಜಾರಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮದ್ಯ ಮತ್ತು ಬಿಯರ್ ದರಗಳನ್ನು ಪರಿಷ್ಕರಿಸಿ ರಾಜ್ಯ ಸರ್ಕಾರ ಅಧಿಕೃತ ನೂತನ ದರಪಟ್ಟಿಯನ್ನು ಹೊರಡಿಸಿದೆ.
ಸರ್ಕಾರದ ನೂತನ ಆದೇಶದ ಪ್ರಕಾರ, ಮದ್ಯದಲ್ಲಿರುವ ಆಲ್ಕೋಹಾಲ್ ಅಂಶದ (Alcoholic Strength) ಆಧಾರದ ಮೇಲೆ ಸುಂಕವನ್ನು ನಿಗದಿಪಡಿಸಲಾಗಿದೆ. ಇಂದಿನಿಂದಲೇ ಜಾರಿಗೆ ಬರುವಂತೆ ಹೊಸ ದರಗಳು ಅನ್ವಯವಾಗಲಿದ್ದು, ಮದ್ಯದ ವಿವಿಧ ಬ್ರ್ಯಾಂಡ್‌ಗಳ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ. ಇದು ಗಿರಾಕಿಗಳ ಜೇಬಿಗೆ ಭಾರಿ ಕತ್ತರಿ ಹಾಕುವುದರಲ್ಲಿ ಯಾವುದೇ ಅನುಮಾನವಿಲ್ಲ.
ಬಿಯರ್ ಬೆಲೆಯಲ್ಲಿ ಭಾರಿ ಏರಿಕೆ
ಹೊಸ ದರ ಪಟ್ಟಿಯ ಅನ್ವಯ ಪ್ರಮುಖವಾಗಿ ಬಿಯರ್ ಪ್ರಿಯರಿಗೆ ದೊಡ್ಡ ಮಟ್ಟದ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಪ್ರತಿ ಬಾಟಲ್ ಬಿಯರ್ ಬೆಲೆಯಲ್ಲಿ ಕನಿಷ್ಠ 10 ರೂಪಾಯಿಯಿಂದ ಹಿಡಿದು, ಬ್ರ್ಯಾಂಡ್‌ಗಳಿಗೆ ಅನುಗುಣವಾಗಿ 20 ರಿಂದ 30 ರೂಪಾಯಿಗಳವರೆಗೆ ಹೆಚ್ಚಳ ಮಾಡಲು ಸರ್ಕಾರ ಅನುಮತಿ ನೀಡಿದೆ. ಮುಂಬರುವ ದಿನಗಳಲ್ಲಿ ಬಿಯರ್ ಖರೀದಿ ಮತ್ತಷ್ಟು ದುಬಾರಿಯಾಗಲಿದೆ.
ಆಲ್ಕೋಹಾಲ್ ಪ್ರಮಾಣ ಆಧರಿಸಿ ಹೊಸ ಸುಂಕ
ಕೇವಲ ಬಿಯರ್ ಮಾತ್ರವಲ್ಲದೆ, ಐಎಂಎಫ್‌ಎಲ್ (IMFL – ಭಾರತೀಯ ನಿರ್ಮಿತ ವಿದೇಶಿ ಮದ್ಯ) ಬೆಲೆಯೂ ಏರಿಕೆಯಾಗಿದೆ. ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣಕ್ಕೆ ಅನುಗುಣವಾಗಿ ಸ್ಲ್ಯಾಬ್‌ಗಳನ್ನು ಗುರುತಿಸಿ ಹೊಸದಾಗಿ ಅಬಕಾರಿ ಸುಂಕವನ್ನು (Excise Duty) ವಿಧಿಸಲಾಗಿದೆ. ಜನಪ್ರಿಯ ಹಾಗೂ ಪ್ರೀಮಿಯಂ ಬ್ರ್ಯಾಂಡ್‌ಗಳ ಲಿಕ್ಕರ್ ಬೆಲೆಗಳು ಶೇಕಡಾ 5 ರಿಂದ 10 ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.
ಸರ್ಕಾರದ ಆದಾಯ ವೃದ್ಧಿಗೆ ಪ್ಲಾನ್
ರಾಜ್ಯ ಸರ್ಕಾರದ ಪ್ರಸಕ್ತ ಹಣಕಾಸು ವರ್ಷದ ಆದಾಯದ ಗುರಿಯನ್ನು ತಲುಪಲು ಮತ್ತು ಗ್ಯಾರಂಟಿ ಯೋಜನೆಗಳಿಗೆ ಸಂಪನ್ಮೂಲ ಕ್ರೋಢೀಕರಿಸಲು ಈ ದರ ಪರಿಷ್ಕರಣೆ ಅನಿವಾರ್ಯವಾಗಿತ್ತು ಎಂದು ಮೂಲಗಳು ತಿಳಿಸಿವೆ. ಮದ್ಯದ ಮೇಲಿನ ಸುಂಕ ಹೆಚ್ಚಳದಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಹೆಚ್ಚುವರಿ ಆದಾಯ ಹರಿದುಬರಲಿದೆ.








