ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಕರ್ನಾಟಕದ ನಾಡಗೀತೆಯಾದ “ಜಯ ಭಾರತ ಜನನಿಯ ತನುಜಾತೆ”ಯನ್ನು ಕಡ್ಡಾಯವಾಗಿ ಹಾಡುವಂತೆ ಶಾಲಾ ಶಿಕ್ಷಣ ಇಲಾಖೆಯು ಕಡಕ್ ಆದೇಶ ಹೊರಡಿಸಿದೆ. ಈ ನಿಯಮವನ್ನು ಉಲ್ಲಂಘಿಸುವ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ.
ವಿದ್ಯಾರ್ಥಿಗಳಲ್ಲಿ ರಾಜ್ಯದ ಸಂಸ್ಕೃತಿ, ಭಾಷಾ ಅಸ್ಮಿತೆ, ದೇಶಭಕ್ತಿ ಮತ್ತು ಪ್ರಾದೇಶಿಕ ಹೆಮ್ಮೆಯನ್ನು ಬೆಳೆಸುವ ಉದ್ದೇಶದಿಂದ ಈ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಸುತ್ತೋಲೆಯಲ್ಲಿರುವ ಪ್ರಮುಖ ಮಾರ್ಗಸೂಚಿಗಳು:
ದಿನಚರಿಯ ಅಂಗವಾಗಿ ಗಾಯನ: ಪ್ರತಿದಿನ ಶಾಲೆಯ ಪ್ರಾರ್ಥನಾ ಸಮಯದಲ್ಲಿ ನಾಡಗೀತೆಯನ್ನು ಸಾಮೂಹಿಕವಾಗಿ, ಲಯಬದ್ಧವಾಗಿ ಮತ್ತು ಸರಿಯಾದ ಉಚ್ಚಾರಣೆಯೊಂದಿಗೆ ನಿಗದಿತ ಅವಧಿಯಲ್ಲಿ ಹಾಡಬೇಕು.
ಸಂಗೀತ ಶಿಕ್ಷಕರಿಂದ ತರಬೇತಿ: ವಿದ್ಯಾರ್ಥಿಗಳು ನಾಡಗೀತೆಯನ್ನು ಶುದ್ಧ ಕನ್ನಡದಲ್ಲಿ, ಸರಿಯಾದ ಸ್ವರ ಹಾಗೂ ಲಯದೊಂದಿಗೆ ಹಾಡಲು ಅನುಕೂಲವಾಗುವಂತೆ ಶಾಲೆಯ ಸಂಗೀತ ಶಿಕ್ಷಕರ ಮೂಲಕ ಸೂಕ್ತ ತರಬೇತಿ ನೀಡಬೇಕು.
ವಿಶೇಷ ದಿನಗಳಲ್ಲೂ ಕಡ್ಡಾಯ: ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಸೇರಿದಂತೆ ಎಲ್ಲಾ ರಾಷ್ಟ್ರೀಯ ಹಬ್ಬಗಳು, ನಾಡಹಬ್ಬಗಳು, ಶಾಲಾ ವಾರ್ಷಿಕೋತ್ಸವ ಹಾಗೂ ರಾಜ್ಯ ಮಟ್ಟದ ಕಾರ್ಯಕ್ರಮಗಳಲ್ಲೂ ನಾಡಗೀತೆಯನ್ನು ಕಡ್ಡಾಯವಾಗಿ ಹಾಡತಕ್ಕದ್ದು.
ಅರ್ಥದ ಅರಿವು ಮೂಡಿಸುವುದು: ವಿದ್ಯಾರ್ಥಿಗಳು ಕೇವಲ ಯಾಂತ್ರಿಕವಾಗಿ ಹಾಡುವುದರ ಬದಲಿಗೆ, ಸ್ವಯಂಪ್ರೇರಣೆಯಿಂದ ಭಾವಪೂರ್ಣವಾಗಿ ಹಾಡಲು ಅನುವಾಗುವಂತೆ ಕನ್ನಡ ಭಾಷಾ ಶಿಕ್ಷಕರು ನಾಡಗೀತೆಯ ಅರ್ಥ ಮತ್ತು ಅದರ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಡಬೇಕು.
ಶಿಸ್ತು ಮತ್ತು ಗೌರವಕ್ಕೆ ಆದ್ಯತೆ:
ನಾಡಗೀತೆ ಹಾಡುವಾಗ ವಿದ್ಯಾರ್ಥಿಗಳಲ್ಲಿ ಶಿಸ್ತು, ಗೌರವ ಮತ್ತು ಐಕ್ಯತೆಯ ಭಾವನೆ ಮೂಡುವುದು ಮುಖ್ಯವಾಗಿದೆ. ವಿದ್ಯಾರ್ಥಿಗಳು ಯಾವುದೇ ಬಾಹ್ಯ ಒತ್ತಡವಿಲ್ಲದೆ ಗೌರವಪೂರ್ವಕವಾಗಿ ಹಾಡುವ ವಾತಾವರಣವನ್ನು ಸೃಷ್ಟಿಸಬೇಕು. ಅಲ್ಲದೆ, ಈ ಸುತ್ತೋಲೆಯನ್ನು ಶಾಲೆಯ ನೋಟಿಸ್ ಬೋರ್ಡ್ನಲ್ಲಿ ಪ್ರದರ್ಶಿಸಿ, ಇದರ ಹಿನ್ನೆಲೆಯನ್ನು ಪೋಷಕರಿಗೂ ತಲುಪಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ (ಪ್ರಾಥಮಿಕ ಶಿಕ್ಷಣ) ನಿರ್ದೇಶಕರು ಆದೇಶಿಸಿದ್ದಾರೆ.
ನಿರ್ಲಕ್ಷ್ಯ ವಹಿಸಿದರೆ ಕಠಿಣ ಕ್ರಮ
ಈ ಪ್ರಕ್ರಿಯೆಯು ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯ ಸಿದ್ಧತೆ ಹಾಗೂ ಶಿಸ್ತಿಗೆ ಪೂರಕವಾಗಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಒಂದು ವೇಳೆ ಯಾವುದೇ ಶಾಲೆಯಲ್ಲಿ ನಿಯಮ ಪಾಲನೆಯಲ್ಲಿ ನಿರ್ಲಕ್ಷ್ಯ ಕಂಡುಬಂದರೆ ಮತ್ತು ಆ ಬಗ್ಗೆ ವರದಿ ಮಾಡಲು ವಿಫಲವಾದರೆ, ಆಯಾ ಜಿಲ್ಲಾ ಉಪನಿರ್ದೇಶಕರನ್ನು (DDPUE/DDPI) ನೇರ ಹೊಣೆಗಾರರನ್ನಾಗಿ ಮಾಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.









