ಶಿವಮೊಗ್ಗ: ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ಗೆ ಅವಕಾಶ ಕೊಟ್ಟಿರುವುದನ್ನು ಖಂಡಿಸಿ, ತಾಲ್ಲೂಕಿನ ಬೇಸೂರು ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಭೂಮಿ ಮಂಜೂರು ಮಾಡದಂತೆ ಒತ್ತಾಯಿಸಿ ಹಾಗೂ ಸಾಗರ ನಗರದ ಮಾರ್ಕೇಟ್ ರಸ್ತೆ ಅಗಲೀಕರಣ ಕಾಮಗಾರಿಯನ್ನು ತಕ್ಷಣವೇ ಆರಂಭಿಸುವಂತೆ ಆಗ್ರಹಿಸಿ ಇಂದು ಬಿಜೆಪಿ ವತಿಯಿಂದ ಸಾಗರದ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಬಿಜೆಪಿ ಪ್ರಮುಖರು ಮತ್ತು ಕಾರ್ಯಕರ್ತರ ನಿಯೋಗವು ಸರ್ಕಾರದ ವಿವಿಧ ನೀತಿಗಳು ಮತ್ತು ಸ್ಥಳೀಯ ಸಮಸ್ಯೆಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಈ ಜಂಟಿ ಮನವಿಯನ್ನು ಹಸ್ತಾಂತರಿಸಿತು.

‘ಹಿಜಾಬ್ ಅನುಮತಿ ಸಂವಿಧಾನ ವಿರೋಧಿ ಮತ್ತು ತುಷ್ಟೀಕರಣದ ರಾಜಕಾರಣ’
ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬಾರದು ಎಂದು ರಾಜ್ಯ ಉಚ್ಚ ನ್ಯಾಯಾಲಯ ಈ ಹಿಂದೆ ಸ್ಪಷ್ಟ ತೀರ್ಪು ನೀಡಿದೆ. ಈ ಆದೇಶವನ್ನು ಪ್ರಶ್ನಿಸಿ ಸದ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಇಂತಹ ಸೂಕ್ಷ್ಮ ಹಂತದಲ್ಲಿ ಕರ್ನಾಟಕ ಸರ್ಕಾರವು ಒಂದು ವರ್ಗದ ತುಷ್ಟೀಕರಣಕ್ಕಾಗಿ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡಿರುವುದು ಖಂಡನೀಯ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಶಾಲೆಗಳಲ್ಲಿ ಧರ್ಮದ ಆಧಾರದ ಮೇಲೆ ಮಕ್ಕಳನ್ನು ವಿಭಜಿಸುವುದು ಸಂವಿಧಾನ ವಿರೋಧಿ ನಡೆಯಾಗಿದೆ. ಇದು ವಿದ್ಯಾರ್ಥಿಗಳ ಕೋಮಲ ಮನಸ್ಸಿನ ಮೇಲೆ ಅತ್ಯಂತ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ರಾಜ್ಯ ಸರ್ಕಾರವು ಹಿಜಾಬ್ ಧರಿಸಲು ನೀಡಿರುವ ತನ್ನ ನಿರ್ಣಯವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಬಿಜೆಪಿ ಮುಖಂಡರು ಒತ್ತಾಯಿಸಿದರು.
ಬೇಸೂರು ಅಣು ವಿದ್ಯುತ್ ಸ್ಥಾವರಕ್ಕೆ ತೀವ್ರ ವಿರೋಧ
ಸಾಗರ ತಾಲ್ಲೂಕಿನ ಬೇಸೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಮಾಡಲು ಈಗಾಗಲೇ ಭೂಮಿಯ ಲಭ್ಯತೆ ಕುರಿತು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮಾಹಿತಿ ಸಲ್ಲಿಸಲಾಗಿದೆ. ಈ ಯೋಜನೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಕೈಗಾ ಅಣು ವಿದ್ಯುತ್ ಸ್ಥಾವರದ ಸುತ್ತಮುತ್ತಲಿನ ಜನರಲ್ಲಿ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು ಸೇರಿದಂತೆ ವಿಪರೀತ ದೈಹಿಕ ಸಮಸ್ಯೆಗಳು ಕಾಣಿಸಿಕೊಂಡಿರುವುದು ಅನೇಕ ವರದಿಗಳಿಂದ ಸಾಬೀತಾಗಿದೆ. ಈಗ ಬೇಸೂರು ಭಾಗದಲ್ಲಿ ಯೂರೇನಿಯಂ ಆಧಾರಿತ ಅಣುಸ್ಥಾವರ ಸ್ಥಾಪಿಸಿದರೆ ಮಲೆನಾಡಿನ ಪರಿಸರ ಹಾಗೂ ಜನಜೀವನಕ್ಕೆ ದೊಡ್ಡ ಕಂಟಕ ಎದುರಾಗಲಿದೆ. ಈಗಾಗಲೇ ಶರಾವತಿ ಕೊಳ್ಳದ ಜನರು ಎರಡು ಬಾರಿ ಮುಳುಗಡೆ ಸಂತ್ರಸ್ತರಾಗಿ ತೊಂದರೆ ಅನುಭವಿಸಿದ್ದಾರೆ ಮತ್ತು ಇಂದಿಗೂ ಅವರಿಗೆ ನ್ಯಾಯಸಮ್ಮತ ಪರಿಹಾರ ಸಿಕ್ಕಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮತ್ತೊಂದು ವಿನಾಶಕಾರಿ ಯೋಜನೆ ತಂದು ಜನರ ಬದುಕನ್ನು ಸಂಕಷ್ಟಕ್ಕೆ ತಳ್ಳಬಾರದು. ರಾಜ್ಯ ಸರ್ಕಾರ ಈ ಸ್ಥಾವರಕ್ಕೆ ಯಾವುದೇ ಕಾರಣಕ್ಕೂ ಭೂಮಿ ಮಂಜೂರು ಮಾಡಬಾರದು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ನೆನಗುದಿಗೆ ಬಿದ್ದ ಮಾರ್ಕೇಟ್ ರಸ್ತೆ ಅಗಲೀಕರಣಕ್ಕೆ ಮುಕ್ತಿ ನೀಡಿ
ಸ್ಥಳೀಯ ಪ್ರಮುಖ ಸಮಸ್ಯೆಯಾದ ಸಾಗರ ಪಟ್ಟಣದ ಮಾರ್ಕೇಟ್ ರಸ್ತೆ ಅಗಲೀಕರಣ ಕಾಮಗಾರಿಯು ದೀರ್ಘಕಾಲದಿಂದ ನೆನಗುದಿಗೆ ಬಿದ್ದಿದೆ. ಇದರಿಂದಾಗಿ ಸಾರ್ವಜನಿಕರಿಗೆ, ವ್ಯಾಪಾರಿಗಳಿಗೆ ಹಾಗೂ ವಾಹನ ಸವಾರರಿಗೆ ಪ್ರತಿದಿನ ತೀವ್ರ ತೊಂದರೆಯಾಗುತ್ತಿದೆ. ಸಾಗರ ಪಟ್ಟಣದ ಜನರ ಬಹುಕಾಲದ ಬೇಡಿಕೆಯಾಗಿರುವ ಮಾರ್ಕೇಟ್ ರಸ್ತೆಯನ್ನು ಕೂಡಲೇ ಅಗಲೀಕರಣಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ನಿಯೋಗ ಒತ್ತಾಯಿಸಿತು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ ಹಕ್ರೆ, ಅರುಣ ಕುಗ್ವೆ, ರವೀಂದ್ರ ಬಿ.ಟಿ., ರಾಜೇಶ್, ಜಿ.ಕೆ.ಭೈರಪ್ಪ, ರಮೇಶ್ ಹಾರೆಗೊಪ್ಪ, ಹರೀಶ್ ಮೂಡಳ್ಳಿ, ಪರಶುರಾಮ, ದೇಂದ್ರಪ್ಪ, ಶಾಂತಪ್ಪ ಗೌಡ, ಕೆ.ವಿ.ಪ್ರವೀಣ್ ಸೇರಿದಂತೆ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಹಗರಣಕ್ಕೆ ಬಿಗ್ ಟ್ವಿಸ್ಟ್: ರಾಜಸ್ಥಾನದ ಒಂದೇ ಕುಟುಂಬ, 5 ಜನ, ಸತತ 2 ವರ್ಷ ನೀಟ್ ಪಾಸ್








