ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ತೀವ್ರ ಬಿಕ್ಕಟ್ಟು ಮತ್ತು ಸಮುದ್ರ ಮಾರ್ಗದ ಭದ್ರತೆಯ ಆತಂಕಗಳ ನಡುವೆಯೇ ಇರಾನ್ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದೆ. ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ‘ಹಾರ್ಮುಜ್ ಜಲಸಂಧಿ’ (Strait of Hormuz) ಸಂಪೂರ್ಣವಾಗಿ ಮುಕ್ತವಾಗಿದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ (Abbas Araghchi) ಸ್ಪಷ್ಟಪಡಿಸಿದ್ದಾರೆ. ಆದರೆ, “ಯಾವ ದೇಶಗಳು ಇರಾನ್ ವಿರುದ್ಧ ನೇರ ಯುದ್ಧ ಸಾರಿವೆಯೋ ಅಂತಹ ಶತ್ರು ರಾಷ್ಟ್ರಗಳ ಹಡಗುಗಳಿಗೆ ಮಾತ್ರ ಇಲ್ಲಿ ಪ್ರವೇಶವಿರುವುದಿಲ್ಲ” ಎಂದು ಅವರು ಖಡಕ್ ಷರತ್ತು ವಿಧಿಸಿದ್ದಾರೆ.
ನವದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ (BRICS) ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿರುವ ಇರಾನ್ ಸಚಿವರು, ಜಾಗತಿಕ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಇರಾನ್ ಸಂಪೂರ್ಣ ರಕ್ಷಣೆ ನೀಡಲಿದೆ ಎಂದು ಭರವಸೆ ನೀಡಿದ್ದಾರೆ.
ಪ್ರಸ್ತುತ ಹಾರ್ಮುಜ್ ಜಲಸಂಧಿಯ ಪರಿಸ್ಥಿತಿ ಅತ್ಯಂತ ಸಂಕೀರ್ಣವಾಗಿದೆ ಎಂಬುದನ್ನು ಒಪ್ಪಿಕೊಂಡ ಸಚಿವ ಅರಾಘ್ಚಿ, “ನಮ್ಮ ನಿಲುವನ್ನು ನಾವು ಸ್ಪಷ್ಟಪಡಿಸುತ್ತೇವೆ, ಈ ಜಲಸಂಧಿಯು ಎಲ್ಲರಿಗೂ ಮುಕ್ತವಾಗಿದೆ. ಶಾಂತಿಯುತವಾಗಿ ವ್ಯಾಪಾರ ನಡೆಸಲು ಬಯಸುವ ಎಲ್ಲಾ ಹಡಗುಗಳ ಸುರಕ್ಷಿತ ಸಂಚಾರಕ್ಕೆ ನೆರವಾಗಲು ಇರಾನ್ ನೌಕಾಪಡೆ ಸಿದ್ಧವಿದೆ” ಎಂದರು.
ಪಶ್ಚಿಮ ಏಷ್ಯಾದ ಇಂದಿನ ಅಸ್ಥಿರತೆಗೆ ಅಮೆರಿಕದ ಆಕ್ರಮಣಕಾರಿ ನೀತಿಯೇ ಕಾರಣ ಎಂದು ಜಿhighlight ಮಾಡಿದ ಅವರು, “ನಮಗೆ ಅಮೆರಿಕನ್ನರ ಮೇಲೆ ಯಾವುದೇ ನಂಬಿಕೆಯಿಲ್ಲ. ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಗಳು ವಿಫಲವಾದ ನಂತರ ಅವರು ಈಗ ರಾಜತಾಂತ್ರಿಕ ಮಾತುಕತೆಗೆ ಮುಂದಾಗುತ್ತಿದ್ದಾರೆ” ಎಂದು ಕಿಡಿಕಾರಿದರು.
ಭೌಗೋಳಿಕ ಮತ್ತು ಕಾನೂನಾತ್ಮಕ ಅಂಶವನ್ನು ಪ್ರಸ್ತಾಪಿಸಿದ ಇರಾನ್ ಸಚಿವ, “ಹಾರ್ಮುಜ್ ಜಲಸಂಧಿಯು ಸಂಪೂರ್ಣವಾಗಿ ಇರಾನ್ ಮತ್ತು ಒಮಾನ್ ದೇಶಗಳ ಗಡಿಯೊಳಗೆ ಬರುತ್ತದೆ. ಇಲ್ಲಿ ಯಾವುದೇ ಅಂತರರಾಷ್ಟ್ರೀಯ ಜಲಪ್ರದೇಶ (International waters) ಇಲ್ಲ” ಎಂದು ಪ್ರತಿಪಾದಿಸಿದರು.








