ವ್ಯಾಪಕ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ (Paper leak) ‘ನೀಟ್ ಯುಜಿ 2026’ (NEET UG 2026) ಪರೀಕ್ಷೆ ರದ್ದಾದ ಹಿನ್ನೆಲೆಯಲ್ಲಿ, ಮೇ 14 ರಂದು ಆತ್ಮಹತ್ಯೆ ಮಾಡಿಕೊಂಡ ಲಖಿಂಪುರ್ ಖೇರಿಯ 21 ವರ್ಷದ ಯುವಕ ರಿತಿಕ್ ಮಿಶ್ರಾ ಅವರ ಸಾವಿಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರವನ್ನು ದೂಷಿಸಿದ್ದಾರೆ.
”ಈ ಮಕ್ಕಳು ಪರೀಕ್ಷೆಯಲ್ಲಿ ಸೋಲಲಿಲ್ಲ, ಇವರನ್ನು ಭ್ರಷ್ಟ ವ್ಯವಸ್ಥೆಯು ಕೊಂದಿದೆ. ಇದು ಆತ್ಮಹತ್ಯೆಯಲ್ಲ – ಇದು ವ್ಯವಸ್ಥೆಯು ಮಾಡಿರುವ ಕೊಲೆ,” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ನೀಟ್ ಪರೀಕ್ಷೆ ರದ್ದಾದ ಹಿನ್ನೆಲೆಯಲ್ಲಿ, ಇಲ್ಲಿನ ಗಂಗೋತ್ರಿನಗರ ಪ್ರದೇಶದ ಮನೆಯೊಂದರಲ್ಲಿ ಗುರುವಾರದಂದು 21 ವರ್ಷದ ನೀಟ್ ಆಕಾಂಕ್ಷಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಕೆಲವು ಗಂಟೆಗಳ ನಂತರ ಗಾಂಧಿ ಅವರ ಈ ಟ್ವೀಟ್ ಬಂದಿದೆ ಎಂದು ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ. ಇದು ರಿತಿಕ್ ಮಿಶ್ರಾ ಅವರ ಮೂರನೇ ನೀಟ್ ಪ್ರಯತ್ನವಾಗಿತ್ತು ಮತ್ತು ಈ ಬಾರಿ ಅವರು ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಬಗ್ಗೆ ಅಪಾರ ಆತ್ಮವಿಶ್ವಾಸ ಹೊಂದಿದ್ದರು ಎಂದು ಅವರ ತಂದೆ ಪಿಟಿಐ (PTI) ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ರಿತಿಕ್ ಈಸಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಸನ್ಪುರ ಕಟೌಲಿ ಗ್ರಾಮದವರಾಗಿದ್ದು, ಲಖಿಂಪುರ್ ನಗರದ ಗಂಗೋತ್ರಿನಗರದಲ್ಲೂ ಮತ್ತೊಂದು ಕೌಟುಂಬಿಕ ನಿವಾಸವನ್ನು ಹೊಂದಿದ್ದರು.
ಗೋವಾದ ಕುರ್ತೋರಿಮ್ನ ನೆಸಾಯ್ನಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ 17 ವರ್ಷದ ಮತ್ತೊಬ್ಬ ವಿದ್ಯಾರ್ಥಿಯ ಘಟನೆಯನ್ನು ಸಹ ರಾಹುಲ್ ಪ್ರಸ್ತಾಪಿಸಿದ್ದಾರೆ. ಸ್ಥಳೀಯ ಪೊಲೀಸರು ಘಟನಾ ಸ್ಥಳದಲ್ಲಿ ಆತ್ಮಹತ್ಯೆ ಪತ್ರವನ್ನು (Suicide note) ವಶಪಡಿಸಿಕೊಂಡಿದ್ದಾರೆ. ಆ ಪತ್ರದಲ್ಲಿ, ತಾನು ಇನ್ನು ಮುಂದೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಲು ಬಯಸುವುದಿಲ್ಲ ಎಂದು ವಿದ್ಯಾರ್ಥಿಯು ತನ್ನ ತೀವ್ರ ಹತಾಶೆಯನ್ನು ವ್ಯಕ್ತಪಡಿಸಿದ್ದಾನೆ ಎಂದು ವರದಿಯಾಗಿದೆ.
”ಅಂಕಿ-ಅಂಶಗಳನ್ನು ನೋಡಿ: 2015 ರಿಂದ 2026 ರವರೆಗೆ – 148 ಪರೀಕ್ಷಾ ಹಗರಣಗಳು ನಡೆದಿವೆ. 87 ಪರೀಕ್ಷೆಗಳು ರದ್ದಾಗಿದ್ದು, 9 ಕೋಟಿ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರಿದೆ. 148 ಹಗರಣಗಳಲ್ಲಿ ಶಿಕ್ಷೆಯಾಗಿರುವುದು – ಕೇವಲ ಒಬ್ಬನಿಗೆ ಮಾತ್ರ. ಸಿಬಿಐ (CBI) 17 ಪ್ರಕರಣಗಳನ್ನು ಮತ್ತು ಇಡಿ (ED) 11 ಪ್ರಕರಣಗಳನ್ನು ಕೈಗೆತ್ತಿಕೊಂಡಿವೆ – ಆದರೆ ಯಾರಿಗೂ ಶಿಕ್ಷೆಯಾಗಿಲ್ಲ. ಕೇವಲ ನೀಟ್ (NEET), ಎಐಪಿಎಂಟಿ (AIPMT) ಮತ್ತು ಇತರ ವೈದ್ಯಕೀಯ ಪರೀಕ್ಷೆಗಳಲ್ಲೇ ಒಟ್ಟು 15 ಹಗರಣಗಳು ನಡೆದಿವೆ,” ಎಂದು ಗಾಂಧಿ ಸೇರಿಸಿದ್ದಾರೆ.
ಈ ಎಲ್ಲಾ ಹಗರಣಗಳ ನಂತರವೂ ಯಾವುದೇ ಸಚಿವರನ್ನು ಹೊಣೆಗಾರರನ್ನಾಗಿ ಮಾಡಿಲ್ಲ ಎಂದು ರಾಹುಲ್ ಆರೋಪಿಸಿದ್ದಾರೆ.








