ಬೆಂಗಳೂರು : ರಾಜ್ಯದ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ರಾಜ್ಯ ಸರ್ಕಾರ ಮತ್ತೆ ಅನುಮತಿ ನೀಡಿದ ವಿಚಾರವಾಗಿ, ಏನೇ ಟೀಕೆ-ಟಿಪ್ಪಣಿ ಮಾಡಲಿ. ಎಲ್ಲಾ ಚೆನ್ನಾಗಿರಲಿ ಅಂತ ಕಾನೂನುಗಳನ್ನಾಗಲಿ, ನೀತಿಗಳನ್ನು ಮಾಡುತ್ತಾರೆ. ಹಿಜಾಬ್ ಹಿಂದಿನಿಂದಲೂ ಹಾಕುತ್ತಿದ್ದರು. ಹೊಸದಾಗಿ ಏನೂ ಹಾಕುತ್ತಿಲ್ಲ. ಮಧ್ಯದಲ್ಲಿ ಇವರೇ ಗೊಂದಲ ಸೃಷ್ಟಿ ಮಾಡಿದರು ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.
ಬೆಂಗಳೂರಿನ ಸದಾಶಿವ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡಿರುವುದು ಕೇಂದ್ರ ಸರ್ಕಾರದ ನೀತಿಯನ್ನು ಎಕ್ಸ್ಪೋಸ್ ಮಾಡಿದೆ. ಕೇಂದ್ರ ಸರ್ಕಾರ ಜನಪರವಾಗಿಲ್ಲ ಎಂಬುದನ್ನು ಈ ಬೆಳವಣಿಗೆ ಹೇಳುತ್ತದೆ. ವಿಪರೀತ ಬೆಲೆ ಏರಿಕೆ ಆಗ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಸಲಾಗಿದೆ. ಇದನ್ನು ಕೇಂದ್ರ ಮಾಡಬಾರದಿತ್ತು ಎಂದರು.
ರಾಜ್ಯದಲ್ಲಿ ಎಸ್ಐಆರ್ ವಿಚಾರವಾಗಿ ಪ್ರತಿಕ್ರಿಯಿಸಿ, ಎಸ್ಐಆರ್ ಬಗ್ಗೆ ನಮಗೆಲ್ಲರಿಗೂ ಅನುಮಾನಗಳಿವೆ. ಅದು ಪಶ್ಚಿಮ ಬಂಗಾಳ ಇರಬಹುದು, ಬೇರೆ ಬೇರೆ ರಾಜ್ಯದಲ್ಲಿ ಎಲ್ಲೆಲ್ಲಿ ಎಸ್ಐಆರ್ ಮಾಡಿದ್ದಾರೋ ಅಲ್ಲೆಲ್ಲ ಅನುಮಾನಗಳು ಹುಟ್ಟಿಕೊಂಡಿವೆ. ಕೆಲವರನ್ನು ಉದ್ದೇಶಪೂರ್ವಕವಾಗಿ ಓಟರ್ ಲಿಸ್ಟ್ನಿಂದ ತೆಗೆಯುತ್ತಿದ್ದಾರೆ. ಕೆಲವರನ್ನು ಸೇರ್ಪಡೆ ಮಾಡುತ್ತಿದ್ದಾರೆ. ಮೊನ್ನೆ ನಡೆದ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಹೆಚ್ಚೂ ಕಡಿಮೆ ಜನ ಸಮುದಾಯಕ್ಕೆ ಇದು ಅರ್ಥ ಆಗಿದೆ. ಹಾಗಾಗಿ, ಎಸ್ಐಆರ್ ಬಗ್ಗೆ ನಮಗೂ ಕೂಡ ಅನುಮಾನವಿದೆ ಎಂದು ತಿಳಿಸಿದರು








