ರಾಯಚೂರು: ಇಡೀ ಸಮಾಜವೇ ತಲೆ ತಗ್ಗಿಸುವಂತಹ ಹಾಗೂ ಮಾನವೀಯತೆಯನ್ನೇ ಮರೆತ ಅತ್ಯಂತ ಅಮಾನವೀಯ ಘಟನೆಯೊಂದು ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಹೆತ್ತ ಮಗಳ ರಕ್ಷಣೆಗೆ ನಿಲ್ಲಬೇಕಾದ ತಂದೆ ಮತ್ತು ಆತನ ಸ್ನೇಹಿತನೇ ಸೇರಿ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿರುವ ಘನಘೋರ ಕೃತ್ಯ ನಡೆದಿದ್ದು, ಜಿಲ್ಲೆಯ ಜನತೆಯನ್ನು ತಲ್ಲಣಗೊಳಿಸಿದೆ.
ಎರಡು ವರ್ಷಗಳಿಂದ ನರಕಯಾತನೆ: ಬಂಧಿತ ಆರೋಪಿಗಳನ್ನು ಸಂತ್ರಸ್ತ ಬಾಲಕಿಯ ತಂದೆ ಅಮರೇಶ್ ಹಾಗೂ ಆತನ ಆಪ್ತ ಸ್ನೇಹಿತ ಸೀನು ಎಂದು ಗುರುತಿಸಲಾಗಿದೆ. ಈ ಇಬ್ಬರು ಕಾಮುಕರು ಕಳೆದ ಎರಡು ವರ್ಷಗಳಿಂದ ಆ ರಕ್ಷಣೆ ಇಲ್ಲದ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗುತ್ತಾ, ಆಕೆಗೆ ನರಕಯಾತನೆ ನೀಡಿದ್ದಾರೆ. ಹೆತ್ತ ತಂದೆಯ ಕ್ರೂರತೆಗೆ ಒಳಗಾಗಿ ಹೊರಗೆ ಹೇಳಿಕೊಳ್ಳಲಾಗದೆ ಬಾಲಕಿ ಇಷ್ಟು ದಿನ ಮೌನವಾಗಿ ಕಣ್ಣೀರಿಟ್ಟಿದ್ದಾಳೆ.
ಸಾಂತ್ವಾನ ಕೇಂದ್ರದಲ್ಲಿ ಸತ್ಯ ಬಯಲು: ಇತ್ತೀಚೆಗಷ್ಟೇ ಸಂಕಷ್ಟದಲ್ಲಿದ್ದ ಬಾಲಕಿಯನ್ನು ರಕ್ಷಿಸಿದ ಪೊಲೀಸರು ಮತ್ತು ಅಧಿಕಾರಿಗಳು ಆಕೆಯನ್ನು ಲಿಂಗಸುಗೂರಿನ ಸಾಂತ್ವಾನ ಕೇಂದ್ರಕ್ಕೆ ರವಾನಿಸಿದ್ದರು. ಅಲ್ಲಿ ಕೌನ್ಸಿಲಿಂಗ್ ನಡೆಸುವ ಸಂದರ್ಭದಲ್ಲಿ ಬಾಲಕಿಯು ತನ್ನ ತಂದೆ ಹಾಗೂ ಆತನ ಸ್ನೇಹಿತ ತನಗೆ ನೀಡಿದ ದೈಹಿಕ ಮತ್ತು ಮಾನಸಿಕ ಕಿರುಕುಳ ಹಾಗೂ ಕ್ರೂರತೆಯ ಬಗ್ಗೆ ಕಣ್ಣೀರಿಡುತ್ತಾ ಸತ್ಯ ಬಿಚ್ಚಿಟ್ಟಿದ್ದಾಳೆ. ಬಾಲಕಿಯ ಹೇಳಿಕೆಯನ್ನು ಕೇಳಿ ಸಾಂತ್ವಾನ ಕೇಂದ್ರದ ಸಿಬ್ಬಂದಿಯೇ ಕರಗಿಹೋಗಿದ್ದಾರೆ.
ಪೋಕ್ಸೋ ಹಾಗೂ ಅಟ್ರಾಸಿಟಿ ಕೇಸ್ ದಾಖಲು: ಬಾಲಕಿ ನೀಡಿದ ಕರುಣಾಜನಕ ಹೇಳಿಕೆಯ ಆಧಾರದ ಮೇಲೆ ತಕ್ಷಣವೇ ಕಾರ್ಯಪ್ರವೃತ್ತರಾದ ಲಿಂಗಸುಗೂರು ಠಾಣೆಯ ಪೊಲೀಸರು, ಕಾಮುಕ ತಂದೆ ಅಮರೇಶ್ ಹಾಗೂ ಆತನ ಸ್ನೇಹಿತ ಸೀನು ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡಿದ್ದಾರೆ. ಆರೋಪಿಗಳ ವಿರುದ್ಧ ಪೋಕ್ಸೋ (POCSO) ಕಾಯ್ದೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ (ಅಟ್ರಾಸಿಟಿ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.








