ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಿಷ್ಟಾಚಾರದ ವೇಳೆ ತಮಗೆ ಕುಡಿಯಲು ನೀರು ನೀಡಿದ ಅಧಿಕಾರಿಯೊಬ್ಬರ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ. ಕಡು ಬಿಸಿಲಿನಲ್ಲಿ ಕಾಮಗಾರಿ ವೀಕ್ಷಣೆ ಮಾಡುತ್ತಿದ್ದ ಸಂದರ್ಭದಲ್ಲಿ ಕೇವಲ ನೀರು ತಂದಿದ್ದಕ್ಕೆ ಸಿಎಂ ಆಕ್ರೋಶ ಹೊರಹಾಕಿದ್ದಾರೆ.
ಮೈಸೂರು ನಗರದಾದ್ಯಂತ ನಡೆಯುತ್ತಿರುವ ಪ್ರಮುಖ ರಸ್ತೆ ಹಾಗೂ ಮೂಲಸೌಕರ್ಯ ಕಾಮಗಾರಿಗಳ ಗುಣಮಟ್ಟ ಮತ್ತು ಪ್ರಗತಿಯನ್ನು ಪರಿಶೀಲಿಸಲು ಮುಖ್ಯಮಂತ್ರಿಗಳು ಅಧಿಕಾರಿಗಳ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದರು. ಬಿರು ಬಿಸಿಲಿನಲ್ಲಿ ಸುತ್ತಾಡಿ ಸುಸ್ತಾಗಿದ್ದ ಮುಖ್ಯಮಂತ್ರಿಗಳಿಗೆ ಎಂಜಿನಿಯರ್ ಒಬ್ಬರು ಕುಡಿಯುವ ನೀರಿನ ಬಾಟಲಿಯನ್ನು ನೀಡಲು ಮುಂದಾದರು. ಈ ವೇಳೆ ಸಿಎಂ ಕಿಡಿಕಾರಿದ್ದಾರೆ.
ನೀರು ನೀಡಲು ಬಂದ ಅಧಿಕಾರಿಯನ್ನು ಕಂಡು ಗರಂ ಆದ ಸಿದ್ದರಾಮಯ್ಯ, “ಏ ಜ್ಯೂಸ್ ಇಲ್ವೇನಯ್ಯ? ಏ ಇವನ್ಯಾವನೋ ಬಿಸಿಲಲ್ಲಿ ಎಳನೀರು ತರಬೇಕಲ್ವಾ?” ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದ್ದಾರೆ. ಬಿಸಿಲಿನ ತಾಪಕ್ಕೆ ತತ್ತರಿಸಿದ್ದ ಸಿಎಂ, ಕೇವಲ ನೀರು ತಂದಿದ್ದಕ್ಕೆ ಅಧಿಕಾರಿಗಳ ಸಮಯಪ್ರಜ್ಞೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಿಗಳು ನೀಡಿದ ನೀರನ್ನು ಕುಡಿಯಲು ನಿರಾಕರಿಸಿದ ಮುಖ್ಯಮಂತ್ರಿಗಳು, ಹಾಗೆಯೇ ತಮ್ಮ ಪರಿಶೀಲನಾ ಕಾರ್ಯವನ್ನು ಮುಂದುವರಿಸಿದರು. ಸಿಎಂ ಕೆಂಗಣ್ಣಿಗೆ ಗುರಿಯಾದ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳು ಒಂದು ಕ್ಷಣ ತಬ್ಬಿಬ್ಬಾದರು. ತಕ್ಷಣ ಎಚ್ಚೆತ್ತುಕೊಂಡ ಹಿರಿಯ ಅಧಿಕಾರಿಗಳು, ಮುಂದಿನ ಕಾಮಗಾರಿ ವೀಕ್ಷಣಾ ಸ್ಥಳದಲ್ಲಿ ಎಳನೀರು ಮತ್ತು ಜ್ಯೂಸ್ ವ್ಯವಸ್ಥೆ ಮಾಡುವುದಾಗಿ ತಿಳಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.








