ಬೀದರ್: ತಾಯಿಯನ್ನು ಕಳೆದುಕೊಂಡು ಅನಾಥಪ್ರಜ್ಞೆಯಲ್ಲಿದ್ದ ಎಂಟು ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ನೆರೆಮನೆಯ ವ್ಯಕ್ತಿಯೊಬ್ಬ ಅಮಾನವೀಯವಾಗಿ ಅತ್ಯಾಚಾರ ಎಸಗಿರುವ ಘಟನೆ ಬೀದರ್ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ನಾಗರಿಕ ಸಮಾಜವೇ ತಲೆತಗ್ಗಿಸುವಂತೆ ಮಾಡಿರುವ ಈ ಕೃತ್ಯವು ಜಿಲ್ಲೆಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ತಂದೆ ಕೆಲಸಕ್ಕೆ ಹೋದಾಗ ಕೃತ್ಯ: ಮೂಲಗಳ ಪ್ರಕಾರ, ಈ ಬಾಲಕಿಯು ಇತ್ತೀಚೆಗಷ್ಟೇ ತನ್ನ ತಾಯಿಯನ್ನು ಕಳೆದುಕೊಂಡಿದ್ದಳು. ಬಾಲಕಿಯ ತಂದೆ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು, ಎಂದಿನಂತೆ ಮಗಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ಹೊಂಚು ಹಾಕಿದ್ದ ನೆರೆಮನೆಯ 35 ವರ್ಷದ ಆರೋಪಿ ಧನರಾಜ್ ಕಾಂಬಳೆ ಎಂಬಾತ, ಬಾಲಕಿಯನ್ನು ಪುಸಲಾಯಿಸಿ ತನ್ನ ಮನೆಗೆ ಕರೆದೊಯ್ದಿದ್ದಾನೆ.
ಬಾಲಕಿಯ ಮೇಲೆ ಅಮಾನವೀಯ ಕ್ರೌರ್ಯ: ತನ್ನ ಮೇಲೆ ನಂಬಿಕೆ ಇಟ್ಟಿದ್ದ ಮಗುವಿನ ಮೇಲೆ ಆರೋಪಿ ಧನರಾಜ್ ಅತ್ಯಂತ ಕ್ರೂರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಾಲಕಿಯ ಕಿರುಚಾಟ ಯಾರಿಗೂ ಕೇಳದಂತೆ ಆತ ಅಮಾನವೀಯವಾಗಿ ವರ್ತಿಸಿದ್ದು, ಮಗುವಿನ ದೈಹಿಕ ಸ್ಥಿತಿ ಗಂಭೀರಗೊಂಡಿದೆ. ವಿಷಯ ತಿಳಿಯುತ್ತಿದ್ದಂತೆಯೇ ಮಗುವಿನ ರಕ್ಷಣೆಗೆ ಧಾವಿಸಿದ ಮನೆಯವರು ಹಾಗೂ ಸಂಬಂಧಿಕರು ಆರೋಪಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ರಿಮ್ಸ್ ಆಸ್ಪತ್ರೆಗೆ ದಾಖಲು: ಪ್ರಸ್ತುತ ಗಂಭೀರವಾಗಿ ಗಾಯಗೊಂಡಿರುವ ಬಾಲಕಿಯನ್ನು ಬೀದರ್‌ನ ಜಿಲ್ಲಾ ಆಸ್ಪತ್ರೆಯಾದ ಬ್ರಿಮ್ಸ್ (BRIMS) ಗೆ ದಾಖಲಿಸಲಾಗಿದೆ. ವೈದ್ಯರ ತಂಡ ಬಾಲಕಿಗೆ ತುರ್ತು ಚಿಕಿತ್ಸೆ ನೀಡುತ್ತಿದ್ದು, ಬಾಲಕಿಯ ಆರೋಗ್ಯದ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಮಗುವಿನ ಸ್ಥಿತಿಯನ್ನು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಪೊಲೀಸ್ ತನಿಖೆ: ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿ ಧನರಾಜ್ ಕಾಂಬಳೆಯನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಈ ಕುರಿತು ಸಂತ್ರಸ್ತ ಬಾಲಕಿಯ ತಂದೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನನ್ವಯ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಹೆಡೆಮುರಿ ಕಟ್ಟಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.








