ನವದೆಹಲಿ: ಕೇರಳ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಹತ್ತು ದಿನಗಳು ಕಳೆದರೂ ತೀವ್ರ ಕುತೂಹಲ ಕೆರಳಿಸಿದ್ದ ಮುಖ್ಯಮಂತ್ರಿ ಆಯ್ಕೆಯ ಕಸರತ್ತಿಗೆ ಕೊನೆಗೂ ತೆರೆ ಬಿದ್ದಿದೆ. ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಹಿರಿಯ ನಾಯಕರ ಮಹತ್ವದ ಸುದ್ದಿಗೋಷ್ಠಿಯಲ್ಲಿ, ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಈ ನಿರ್ಧಾರದೊಂದಿಗೆ ಸಿಎಂ ರೇಸ್‌ನಲ್ಲಿದ್ದ ಪ್ರಭಾವಿ ನಾಯಕ ಕೆ.ಸಿ. ವೇಣುಗೋಪಾಲ್ ಅವರಿಗೆ ಸದ್ಯಕ್ಕೆ ಹಿನ್ನಡೆಯಾದಂತಾಗಿದೆ.
ಆದರೆ, ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಕೆ.ಸಿ. ವೇಣುಗೋಪಾಲ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ‘ಬಿಗ್ ಆಫರ್’ ಒಂದನ್ನು ನೀಡಿದೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಪ್ರಸ್ತುತ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ವೇಣುಗೋಪಾಲ್ ಅವರಿಗೆ ಮುಂದಿನ ದಿನಗಳಲ್ಲಿ ಪಕ್ಷದ ಅತ್ಯುನ್ನತ ಸ್ಥಾನವಾದ ಎಐಸಿಸಿ ಅಧ್ಯಕ್ಷ ಪಟ್ಟವನ್ನು ನೀಡುವ ಭರವಸೆಯನ್ನು ಹಿರಿಯ ನಾಯಕರು ನೀಡಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಪ್ರಸ್ತುತ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಅವಧಿಯು ಇನ್ನೊಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಖರ್ಗೆ ಅವರ ನಿವೃತ್ತಿಯ ನಂತರ ತೆರವಾಗುವ ಆಯಕಟ್ಟಿನ ಜಾಗಕ್ಕೆ ವೇಣುಗೋಪಾಲ್ ಅವರನ್ನೇ ನೇಮಕ ಮಾಡುವ ಇಚ್ಛೆಯನ್ನು ಹೈಕಮಾಂಡ್ ಹೊಂದಿದೆ ಎನ್ನಲಾಗಿದೆ. ದಕ್ಷಿಣ ಭಾರತದ ನಾಯಕರಾಗಿ ಮತ್ತು ಗಾಂಧಿ ಕುಟುಂಬದ ಅತ್ಯಂತ ಆಪ್ತರಾಗಿ ಗುರುತಿಸಿಕೊಂಡಿರುವ ವೇಣುಗೋಪಾಲ್ ಅವರಿಗೆ ಈ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಜವಾಬ್ದಾರಿ ನೀಡಲು ಕಾಂಗ್ರೆಸ್ ಮುಂದಾಗಿದೆ.
ಈ ಪ್ರಬಲ ಭರವಸೆಯ ಹಿನ್ನೆಲೆಯಲ್ಲಿಯೇ ಕೆ.ಸಿ. ವೇಣುಗೋಪಾಲ್ ಅವರು ಕೇರಳ ಸಿಎಂ ರೇಸ್‌ನಿಂದ ಹಠಾತ್ ಹಿಂದೆ ಸರಿದು ಮೌನಕ್ಕೆ ಶರಣಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ರಾಜ್ಯ ರಾಜಕಾರಣಕ್ಕಿಂತ ರಾಷ್ಟ್ರ ಮಟ್ಟದಲ್ಲಿ ಪಕ್ಷವನ್ನು ಮುನ್ನಡೆಸುವ ಅವಕಾಶ ಸಿಗಲಿರುವ ಕಾರಣ, ಅವರು ಹೈಕಮಾಂಡ್ ನಿರ್ಧಾರಕ್ಕೆ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ.







