ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ)ದ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಮೇ 31 ರಂದು ಭಾನುವಾರ ಚಿಕ್ಕಬಳ್ಳಾಪುರ ಕನ್ನಡ ಭವನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಚಿಕ್ಕಬಳ್ಳಾಪುರ ಪತ್ರಿಕಾ ಭವನದಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದಲ್ಲಿ ಜಿಲ್ಲಾ ಸಂಘದ ಪದಾಧಿಕಾರಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ನಿರ್ಣಯಿಸಲಾಗಿದೆ. ಸಭೆಯಲ್ಲಿ ಮಾತನಾಡಿದ ಕೆಯುಡಬ್ಲೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಮೋಕ್ಷಗುಂಡಂ ಸರ್.ಎಂ.ವಿಶೇಶ್ವರಯ್ಯ ಜನ್ಮ ಸ್ಥಳ, ನಂದಿ ಬೆಟ್ಟದ ಸೊಬಗು, ದ್ರಾಕ್ಷಿಯ ನಾಡಿನಲ್ಲಿ ಮೊಟ್ಟ ಮೊದಲ ಬಾರಿಗೆ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಆಯೋಜಿಸುತ್ತಿರುವುದು ಸಂತೋಷದ ಸಂಗತಿ ಎಂದು ಹೇಳಿದರು.
ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಪತ್ರಕರ್ತರ ಸಂಘದ ಸದಸ್ಯರ ಮಕ್ಕಳಿಗೆ ರಾಜ್ಯ ಸಂಘದಿಂದ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದ್ದು ಇದು ರಾಜ್ಯ ಮಟ್ಟದ 6ನೇ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇದಾಗಿದೆ ಎಂದರು. ಬೀದರ್‌ನಿಂದ ಚಾಮರಾಜಪೇಟೆಯವರೆಗೂ ಕೊಡುಗು-ಕೋಲಾರದಿಂದ ಹಿಡಿದು ರಾಜ್ಯದ 31 ಜಿಲ್ಲೆಗಳ ಪತ್ರಕರ್ತರ ಮಕ್ಕಳು ಹಾಗೂ ಪೋಷಕರು ಸೇರಿ ಸುಮಾರು 400 ರಿಂದ 500 ಕ್ಕೂ ಹೆಚ್ಚು ಮಂದಿ ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಪ್ರತಿಭಾ ಪುರಸ್ಕಾರ ಸ್ವೀಕರಿಸಲು ಬರುವ ದೂರದ ಜಿಲ್ಲೆಗಳ ವಿದ್ಯಾರ್ಥಿ ಪೋಷಕರಿಗೆ ಸೂಕ್ತ ವಸತಿ, ಊಟ, ತಿಂಡಿ ಸೌಕರ್ಯ ಮಾಡಲು ಜಿಲ್ಲಾ ಸಂಘಕ್ಕೆ ಸೂಚಿಸಿದ ಅವರು, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮಿನಿ ರಾಜ್ಯ ಪತ್ರಕರ್ತರ ಸಮ್ಮೇಳನದ ಮಾದರಿಯಲ್ಲಿ ನಡೆಯುವಂತೆ ಸಲಹೆ ನೀಡಿದರು.
ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಆದ್ಯತೆ ನೀಡಬೇಕು, ಜಿಲ್ಲೆಯ ಕಲೆ, ಸಂಸ್ಕೃತಿಯ ಹಿರಿಮೆಯನ್ನು ಪರಿಚಯಿಸುವ ವಸ್ತು ಪ್ರದರ್ಶನ ಆಯೋಜನೆಗೆ ಸಲಹೆ ನೀಡಿ ಒಟ್ಟಾರೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಪತ್ರಕರ್ತರ ನೆನಪಿನಲ್ಲಿ ಉಳಿಯುವ ರೀತಿಯಲ್ಲಿ ಆಯೋಜಿಸಬೇಕು ಎಂದರು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ರಾಜ್ಯ ಸಂಘದಿಂದ ನಗದು, ಪ್ರಶಸ್ತಿ ಪತ್ರ ಬಹುಮಾನದ ಜೊತೆಗೆ ಸ್ಮರಣಿಕೆ ನೀಡಲಾಗುವುದೆಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ವಿ.ರವಿಕುಮಾರ್ ಮಾತನಾಡಿ, ರಾಜ್ಯ ಸಂಘದ ನಿರೀಕ್ಷೆಗೂ ಮೀರಿ ಜಿಲ್ಲಾ ಸಂಘವೂ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಸಂಘಟಿಸಲಿದೆ. ಕಾರ್ಯಕ್ರಮದ ಯಶಸ್ವಿಗೆ ಜಿಲ್ಲಾ ಸಂಘ ತಾಲೂಕು ಸಂಘಗಳ ಪದಾಧಿಕಾರಿಗಳನ್ನು ಕರೆದು ವಿವಿಧ ಜವಾಬ್ದಾರಿಗಳನ್ನು ನೀಡಲು ಉಪ ಸಮಿತಿಗಳನ್ನು ರಚಿಸಲಾಗುವುದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ವಿದ್ಯಾರ್ಥಿ ಪೋಷಕರಿಗೆ ಜಿಲ್ಲೆಯ ಪ್ರಮುಖ ಸ್ಥಳಗಳ ಭೇಟಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ರಾಜ್ಯ ಖಜಾಂಚಿ ವಾಸುದೇವಹೊಳ್ಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಗತಿ ನಾಗರಾಜಪ್ಪ, ರಾಜ್ಯ ಸಮಿತಿ ಸದಸ್ಯರಾದ ಎನ್.ಚಂದ್ರಶೇಖರ್ ಮತ್ತಿತರರು ವೇದಿಕೆಯಲ್ಲಿದ್ದರು.
ಸಭೆಯಲ್ಲಿ ಜಿಲ್ಲಾ ಸಂಘದ ಪದಾಧಿಕಾರಿಗಳು, ಕಾರ್ಯಕಾರಣಿ ಮಂಡಳಿ ಸದಸ್ಯರು, ವಿವಿಧ ತಾಲೂಕು ಸಂಘಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಕೇಂದ್ರದ ಹಿರಿಯ ಪತ್ರಕರ್ತರು, ನಿಕಟಪೂರ್ವ ಪದಾಧಿಕಾರಿಗಳು ಉಪಸ್ಥಿತರಿದ್ದು, ಪ್ರತಿಭಾ ಪುರಸ್ಕಾರ ಸಮಾರಂಭದ ಯಶಸ್ವಿನ ಬಗ್ಗೆ ಉಪಯುಕ್ತ ಸಲಹೆಗಳನ್ನು ನೀಡಿದರು








