ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯ ವೇಳೆ ಪಕ್ಷದ ಆದೇಶ ಉಲ್ಲಂಘಿಸಿದ 25 ಬಂಡಾಯ ಶಾಸಕರ ವಿರುದ್ಧ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ (ಇಪಿಎಸ್) ಬುಧವಾರ ಚಾಟಿ ಬೀಸಿದ್ದಾರೆ. ದಳಪತಿ ವಿಜಯ್ ನೇತೃತ್ವದ ಟಿವಿ ಕೆ (TVK) ಸರ್ಕಾರವನ್ನು ಬೆಂಬಲಿಸಿದ ಎಲ್ಲಾ 25 ಶಾಸಕರನ್ನು ಅವರ ಪಕ್ಷದ ಹುದ್ದೆಗಳಿಂದ ತಕ್ಷಣವೇ ತೆಗೆದುಹಾಕಲಾಗಿದೆ.
ವಜಾಗೊಂಡವರಲ್ಲಿ ಎಸ್‌ಪಿ ವೇಲುಮಣಿ, ಸಿ.ವಿ. ಷಣ್ಮುಗಂ, ಸಿ. ವಿಜಯಭಾಸ್ಕರ್ ಮತ್ತು ನಾಥಮ್ ಆರ್. ವಿಶ್ವನಾಥನ್ ಅವರಂತಹ ಪ್ರಭಾವಿ ನಾಯಕರು ಸೇರಿದ್ದಾರೆ. ಇವರ ಬದಲಿಗೆ ಇಪಿಎಸ್ ಈಗಾಗಲೇ ಹೊಸ ಜಿಲ್ಲಾ ಕಾರ್ಯದರ್ಶಿಗಳನ್ನು ನೇಮಿಸಿದ್ದಾರೆ.
ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಸರ್ಕಾರವು ವಿಶ್ವಾಸಮತ ಯಾಚನೆಯಲ್ಲಿ 144:22 ಮತಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿದೆ.ಎಐಎಡಿಎಂಕೆಯ ಒಟ್ಟು ಶಾಸಕರಲ್ಲಿ ಕೇವಲ 22 ಮಂದಿ ಮಾತ್ರ ಪಕ್ಷದ ನಿಲುವಿಗೆ ಬದ್ಧರಾಗಿ ವಿಜಯ್ ಸರ್ಕಾರದ ವಿರುದ್ಧ ಮತ ಚಲಾಯಿಸಿದ್ದಾರೆ. ಆದರೆ, ಸಿ.ವಿ. ಷಣ್ಮುಗಂ ಮತ್ತು ವೇಲುಮಣಿ ಬಣದ 25 ಶಾಸಕರು ಪಕ್ಷದ ವಿಪ್ ಉಲ್ಲಂಘಿಸಿ ವಿಜಯ್ ಪರವಾಗಿ ನಿಂತಿದ್ದಾರೆ.
ಬುಧವಾರ ತಮಿಳುನಾಡು ವಿಧಾನಸಭೆಯು ಭಾರೀ ಗದ್ದಲಕ್ಕೆ ಸಾಕ್ಷಿಯಾಯಿತು. ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ಎಐಎಡಿಎಂಕೆ ಒಳಗಿನ ಬಣ ರಾಜಕೀಯ ಬೀದಿಗೆ ಬಂದಿದೆ. ಮುಖ್ಯಮಂತ್ರಿ ವಿಜಯ್ ಅವರಿಗೆ ಒಟ್ಟು 144 ಮತಗಳು ಲಭಿಸಿದ್ದು, ಅಧಿಕಾರ ಉಳಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದಾರೆ.








