ನವದೆಹಲಿ: ದೇಶಾದ್ಯಂತ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಪ್ರಯಾಣಿಸುವ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಸುಪ್ರೀಂ ಕೋರ್ಟ್ ಗುರುವಾರ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಬಸ್‌ಗಳು ಮತ್ತು ಟ್ಯಾಕ್ಸಿ ಸೇರಿದಂತೆ ಎಲ್ಲಾ ಸಾರ್ವಜನಿಕ ವಾಹನಗಳಲ್ಲಿ ಪ್ಯಾನಿಕ್ ಬಟನ್ (Panic Buttons) ಮತ್ತು ಟ್ರ್ಯಾಕಿಂಗ್ ಸಾಧನಗಳನ್ನು (Vehicle Tracking Devices) ಅಳವಡಿಸುವುದನ್ನು ಕಡ್ಡಾಯಗೊಳಿಸಿದೆ.
ಸರ್ಕಾರಿ ಮತ್ತು ಖಾಸಗಿ ಬಸ್‌ಗಳು, ಟ್ಯಾಕ್ಸಿಗಳು ಹಾಗೂ ಕ್ಯಾಬ್‌ಗಳಲ್ಲಿ ತುರ್ತು ಸಂದರ್ಭದಲ್ಲಿ ಬಳಸಲು ಪ್ಯಾನಿಕ್ ಬಟನ್‌ಗಳನ್ನು ಅಳವಡಿಸಬೇಕು. ಇದರೊಂದಿಗೆ ವಾಹನದ ಚಲನವಲನ ತಿಳಿಯಲು ಜಿಪಿಎಸ್ (GPS) ಆಧಾರಿತ ಟ್ರ್ಯಾಕಿಂಗ್ ವ್ಯವಸ್ಥೆ ಇರಲೇಬೇಕು.
ಪ್ರತಿಯೊಂದು ರಾಜ್ಯವು ವಾಹನಗಳಿಂದ ಬರುವ ತುರ್ತು ಸಂಕೇತಗಳನ್ನು ಸ್ವೀಕರಿಸಲು ಮತ್ತು ತಕ್ಷಣವೇ ಸ್ಪಂದಿಸಲು ಕೇಂದ್ರೀಕೃತ ‘ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್’ಗಳನ್ನು ಸ್ಥಾಪಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಈ ತಂತ್ರಜ್ಞಾನಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ನೀಡಿರುವ ‘ನಿರ್ಭಯಾ ನಿಧಿ’ಯನ್ನು ಸಮರ್ಪಕವಾಗಿ ಬಳಸಿಕೊಳ್ಳದ ರಾಜ್ಯಗಳ ವಿರುದ್ಧ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.
ಈ ಸುರಕ್ಷತಾ ಸಾಧನಗಳನ್ನು ಹೊಂದಿರದ ವಾಹನಗಳಿಗೆ ಫಿಟ್‌ನೆಸ್ ಸರ್ಟಿಫಿಕೇಟ್ ಅಥವಾ ಪರ್ಮಿಟ್ ನವೀಕರಣ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಪೀಠವು ಸ್ಪಷ್ಟಪಡಿಸಿದೆ.








