ನವದೆಹಲಿ : ಮೇ 3 ರಂದು ದೇಶಾದ್ಯಂತ ನಡೆದಿದ್ದ ನೀಟ್ ಅರ್ಹತಾ ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮತ್ತೊಬ್ಬ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ದೆಹಲಿಯ NTA ಕಚೇರಿಯಲ್ಲಿದ್ದ ಅಧಿಕಾರಿಯನ್ನು ಅರೆಸ್ಟ್ ಮಾಡಲಾಗಿದೆ. NTA ಕೇಂದ್ರ ಕಚೇರಿಯಲ್ಲಿ ಈತನನ್ನು ಅರೆಸ್ಟ್ ಮಾಡಲಾಗಿದೆ ಸಿಬಿಐ ತಂಡ NTA ಕಚೇರಿಗೆ ನೇರವಾಗಿ ದಾಳಿ ಮಾಡಿದೆ.
ಮೇ 3 ರಂದು ನಡೆದಿದ್ದ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ಪರೀಕ್ಷೆಗೂ ಮುನ್ನವೇ ಸೋರಿಕೆಯಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸುದೀರ್ಘ ತನಿಖೆ ನಡೆಸುತ್ತಿರುವ ಸಿಬಿಐಗೆ, ಎನ್ಟಿಎ ಒಳಗಿನ ಸಿಬ್ಬಂದಿಯೇ ಈ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಬಲವಾದ ಶಂಕೆ ವ್ಯಕ್ತವಾಗಿತ್ತು. ಅದರಂತೆ ನಡೆಸಿದ ಕಾರ್ಯಾಚರಣೆಯಲ್ಲಿ ಕಚೇರಿಯ ಒಳಗಿದ್ದ ಅಧಿಕಾರಿಯನ್ನೇ ವಶಕ್ಕೆ ಪಡೆಯಲಾಗಿದ್ದು, ಇದು ಪರೀಕ್ಷಾ ವ್ಯವಸ್ಥೆಯೊಳಗಿನ ಭ್ರಷ್ಟಾಚಾರವನ್ನು ಬಯಲಿಗೆಳೆದಿದೆ.
ಬಂಧಿತ ಅಧಿಕಾರಿಯು ಪ್ರಶ್ನೆ ಪತ್ರಿಕೆಗಳ ಭದ್ರತೆ ಅಥವಾ ವಿತರಣಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದ್ದು, ಈತ ಪತ್ರಿಕೆ ಸೋರಿಕೆ ಮಾಡುವ ಜಾಲದೊಂದಿಗೆ ನೇರ ಸಂಪರ್ಕ ಹೊಂದಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಸಿಬಿಐ ಅಧಿಕಾರಿಗಳು ಎನ್ಟಿಎ ಕಚೇರಿಯಲ್ಲಿದ್ದ ಕಂಪ್ಯೂಟರ್ ದಾಖಲೆಗಳು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಮಹತ್ವದ ಫೈಲ್ಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಬಂಧಿತ ಅಧಿಕಾರಿಯನ್ನು ಸದ್ಯ ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ಕಳೆದ ಕೆಲವು ವಾರಗಳಿಂದ ಬಿಹಾರ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಧ್ಯವರ್ತಿಗಳು ಮತ್ತು ವಿದ್ಯಾರ್ಥಿಗಳನ್ನು ಬಂಧಿಸಲಾಗಿತ್ತು. ಆದರೆ, ಈಗ ನೇರವಾಗಿ ಪರೀಕ್ಷೆ ನಡೆಸುವ ಅತ್ಯುನ್ನತ ಸಂಸ್ಥೆಯ ಅಧಿಕಾರಿಯೇ ಸಿಕ್ಕಿಬಿದ್ದಿರುವುದು ಪರೀಕ್ಷೆಯ ಪಾರದರ್ಶಕತೆಯ ಬಗ್ಗೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಂಧನದಿಂದಾಗಿ ಪ್ರಶ್ನೆ ಪತ್ರಿಕೆ ಸೋರಿಕೆಯ ಹಿಂದೆ ಇರುವ ದೊಡ್ಡ ಜಾಲದ ಅಸಲಿ ಮುಖವಾಡಗಳು ಕಳಚುವ ಸಾಧ್ಯತೆಯಿದೆ.
ಈ ಬೆಳವಣಿಗೆಯು ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ತನಿಖೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದು ಕುತೂಹಲಕಾರಿಯಾಗಿದೆ. ಎನ್ಟಿಎ ಕಚೇರಿಯಲ್ಲಿ ನಡೆದ ಈ ದಾಳಿಯು ಪರೀಕ್ಷಾ ಮಂಡಳಿಯ ಆಂತರಿಕ ಭದ್ರತೆಯ ವೈಫಲ್ಯವನ್ನು ಎತ್ತಿ ತೋರಿಸಿದೆ.








