ಬೆಂಗಳೂರು: ದೇಶದಲ್ಲಿ ತೈಲ ಬಳಕೆಯನ್ನು ಕಡಿಮೆ ಮಾಡುವಂತೆ ಹಾಗೂ ಚಿನ್ನದ ಖರೀದಿಯ ಮೇಲೆ ಹತೋಟಿ ಇಟ್ಟುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಜನತೆಯಲ್ಲಿ ಮನವಿ ಮಾಡಿದ್ದರು. ಪ್ರಧಾನಿಯವರ ಈ ಕರೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಮಾದರಿ ಹೆಜ್ಜೆಯನ್ನಿಡಲು ನಿರ್ಧರಿಸಿದ್ದಾರೆ. ಇನ್ನು ಮುಂದೆ ವಾರದಲ್ಲಿ ಮೂರು ದಿನಗಳ ಕಾಲ ತಾವು ಬೆಂಗಾವಲು ವಾಹನಗಳನ್ನು ಬಳಸದಿರಲು ಅವರು ತೀರ್ಮಾನಿಸಿದ್ದಾರೆ.
ಪ್ರಧಾನಿ ಮೋದಿಯವರ ಆಶಯದಂತೆ ಇಂಧನ ಸಂರಕ್ಷಣೆ ಮತ್ತು ದೇಶದ ಆರ್ಥಿಕತೆಗೆ ನೆರವಾಗುವ ಉದ್ದೇಶದಿಂದ ಅಶೋಕ್ ಈ ನಿರ್ಧಾರ ಕೈಗೊಂಡಿದ್ದಾರೆ. ಬೆಂಗಳೂರಿನಲ್ಲಿ ಸಂಚರಿಸುವಾಗ ವಾರದ ಮೂರು ದಿನಗಳು ಯಾವುದೇ ಎಸ್ಕಾರ್ಟ್ ಅಥವಾ ಬೆಂಗಾವಲು ವಾಹನಗಳಿಲ್ಲದೆ ಸಾಮಾನ್ಯರಂತೆ ಸಂಚರಿಸಲಿದ್ದಾರೆ. ಈ ಮೂಲಕ ಅನಗತ್ಯ ಇಂಧನ ವ್ಯಯಕ್ಕೆ ಕಡಿವಾಣ ಹಾಕುವುದು ಅವರ ಪ್ರಮುಖ ಉದ್ದೇಶವಾಗಿದೆ.
ಕೇವಲ ಸರ್ಕಾರಿ ಕಾರ್ಯಕ್ರಮಗಳು ಮಾತ್ರವಲ್ಲದೆ, ವೈಯಕ್ತಿಕ ಅಥವಾ ಖಾಸಗಿ ಕಾರ್ಯಕ್ರಮಗಳಿಗೆ ತೆರಳುವಾಗಲೂ ಬೆಂಗಾವಲು ಪಡೆಯನ್ನು ಬಳಸದಿರಲು ಅವರು ನಿರ್ಧರಿಸಿದ್ದಾರೆ. ಸಾಮಾನ್ಯವಾಗಿ ವಿರೋಧ ಪಕ್ಷದ ನಾಯಕರಿಗೆ ಹೆಚ್ಚಿನ ಭದ್ರತೆ ಮತ್ತು ಬೆಂಗಾವಲು ವಾಹನಗಳ ಸೌಲಭ್ಯವಿರುತ್ತದೆ. ಆದರೆ, ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಇಂಧನ ಉಳಿತಾಯದ ಸಂದೇಶ ಸಾರಲು ಅಶೋಕ್ ಅವರು ಈ ವಿಶೇಷ ನಿಯಮವನ್ನು ತಮಗೇ ವಿಧಿಸಿಕೊಂಡಿದ್ದಾರೆ.
ಬೆಂಗಳೂರಿನಂತಹ ಸಂಚಾರ ದಟ್ಟಣೆ ಹೆಚ್ಚಿರುವ ನಗರದಲ್ಲಿ ದೊಡ್ಡ ಬೆಂಗಾವಲು ಪಡೆಗಳ ಸಂಚಾರದಿಂದ ಜನಸಾಮಾನ್ಯರಿಗೂ ಕಿರಿಕಿರಿಯಾಗುವ ಸಾಧ್ಯತೆ ಇರುತ್ತದೆ. ಅಶೋಕ್ ಅವರ ಈ ನಿರ್ಧಾರದಿಂದ ಇಂಧನ ಉಳಿತಾಯವಾಗುವುದಲ್ಲದೆ, ಟ್ರಾಫಿಕ್ ಸಮಸ್ಯೆಯೂ ಅಲ್ಪಮಟ್ಟಿಗೆ ತಗ್ಗಬಹುದು ಎನ್ನಲಾಗಿದೆ. ವಿರೋಧ ಪಕ್ಷದ ನಾಯಕರ ಈ ನಡೆ ರಾಜಕೀಯ ವಲಯದಲ್ಲಿ ಈಗ ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರದ ಇತರ ಜನಪ್ರತಿನಿಧಿಗಳಿಗೂ ಇದು ಮಾದರಿಯಾಗಬಲ್ಲದೇ ಎಂಬ ಕುತೂಹಲ ಮೂಡಿಸಿದೆ.








