ಲಕ್ನೋ: ಸಮಾಜವಾದಿ ಪಕ್ಷದ ಸಂಸ್ಥಾಪಕ ದಿವಂಗತ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಪುತ್ರ ಮತ್ತು ಅಖಿಲೇಶ್ ಯಾದವ್ ಅವರ ಸಹೋದರ ಪ್ರತೀಕ್ ಯಾದವ್ (38) ಅವರು ಇಂದು (ಬುಧವಾರ, ಮೇ 13, 2026) ಮುಂಜಾನೆ ಲಕ್ನೋದಲ್ಲಿ ನಿಧನರಾಗಿದ್ದಾರೆ.
ಇಂದು ಮುಂಜಾನೆ ಸುಮಾರು 6 ಗಂಟೆಗೆ ಪ್ರತೀಕ್ ಅವರನ್ನು ಲಕ್ನೋದ ಸಿವಿಲ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ, ಆಸ್ಪತ್ರೆಗೆ ತಲುಪುವ ಮೊದಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಪ್ರತೀಕ್ ಅವರ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರವಷ್ಟೇ ಸಾವಿನ ರಹಸ್ಯ ಬಯಲಾಗಲಿದೆ.
ಪ್ರತೀಕ್ ಯಾದವ್ ಅವರು ಮುಲಾಯಂ ಸಿಂಗ್ ಯಾದವ್ ಅವರ ಎರಡನೇ ಪತ್ನಿ ಸಾಧನಾ ಗುಪ್ತಾ ಅವರ ಪುತ್ರ. ಇವರು ಬಿಜೆಪಿ ನಾಯಕಿ ಅಪರ್ಣಾ ಯಾದವ್ ಅವರ ಪತಿಯಾಗಿದ್ದರು. ರಾಜಕೀಯದಿಂದ ದೂರವಿದ್ದ ಪ್ರತೀಕ್ ಅವರು ಲಕ್ನೋದಲ್ಲಿ ರಿಯಲ್ ಎಸ್ಟೇಟ್ ಮತ್ತು ಫಿಟ್‌ನೆಸ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು.








