ಗದಗ: ಕಳೆದ ಐದು ವರ್ಷಗಳಿಂದ ಕಾನೂನು ಸಂಘರ್ಷದಲ್ಲಿ ಸಿಲುಕಿದ್ದ ಪದವೀಧರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕರ್ನಾಟಕ ಆಡಳಿತ ನ್ಯಾಯಮಂಡಳಿ (KAT) ಮಹತ್ವದ ಆದೇಶ ಹೊರಡಿಸಿದೆ. ಮಂಗಳವಾರ 175 ಪುಟಗಳ ಸುದೀರ್ಘ ಅಧಿಕೃತ ಆದೇಶ ಹೊರಡಿಸಿರುವ ಕೆಎಟಿ ಮುಖ್ಯಪೀಠವು, ಎರಡೂ ಬದಿಯ ಅರ್ಜಿದಾರರಿಗೆ ನೇಮಕಾತಿ ನೀಡುವಂತೆ ಸರ್ಕಾರಕ್ಕೆ ಸೂಚಿಸಿದೆ.
ಸರ್ಕಾರಿ ನೇಮಕಾತಿಯಲ್ಲಿ ವಿವಾಹಿತ ಮಹಿಳೆಯರು ಪತಿಯ ಆದಾಯ ಪ್ರಮಾಣಪತ್ರ ಸಲ್ಲಿಸಬೇಕೇ ಅಥವಾ ಪೋಷಕರದ್ದೇ ಎಂಬ ವಿವಾದ ತಲೆದೂರಿತ್ತು. ಇದರಿಂದಾಗಿ ಒಬಿಸಿ (OBC) ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿತ್ತು. ಈ ಗೊಂದಲದಿಂದಾಗಿ ಅನೇಕ ಅಭ್ಯರ್ಥಿಗಳು ನ್ಯಾಯಾಲಯದ ಮೊರೆ ಹೋಗಿದ್ದರು.
ನೇಮಕಾತಿ ಪಟ್ಟಿಯಲ್ಲಿ ಈಗಾಗಲೇ ಹೆಸರಿಸಲ್ಪಟ್ಟಿರುವ, ಪತಿಯ ಆದಾಯ ಪ್ರಮಾಣಪತ್ರ ಸಲ್ಲಿಸಿರುವ ವಿವಾಹಿತ ಮಹಿಳಾ ಅಭ್ಯರ್ಥಿಗಳ ನೇಮಕಾತಿ ಕಾನೂನುಬದ್ಧವಾಗಿದೆ. ಅವರನ್ನು ಪ್ರಕ್ರಿಯೆಯಿಂದ ಹೊರಹಾಕುವಂತಿಲ್ಲ. ಸರ್ಕಾರದ ಆರಂಭಿಕ ತಪ್ಪಿನಿಂದಾಗಿ ಈ ಗೊಂದಲ ಉಂಟಾಗಿರುವುದರಿಂದ, ಇದನ್ನು ಒಂದು ‘ವಿಶೇಷ ಪ್ರಕರಣ’ ಎಂದು ಪರಿಗಣಿಸಲಾಗಿದೆ. ಅದರಂತೆ ಪೋಷಕರ ಆದಾಯ ಪ್ರಮಾಣಪತ್ರ ಸಲ್ಲಿಸಿರುವ ಅಭ್ಯರ್ಥಿಗಳ ಅರ್ಜಿಯನ್ನೂ ಪುರಸ್ಕರಿಸಿ ಅವರಿಗೆ ನೇಮಕಾತಿ ನೀಡಬೇಕು ಎಂದು ನ್ಯಾಯಮಂಡಳಿ ಆದೇಶಿಸಿದೆ.
ಇಡೀ ನೇಮಕಾತಿ ಪ್ರಕ್ರಿಯೆಯನ್ನು ಮುಂದಿನ ಮೂರು ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ.ಕಳೆದ ವಾರವಷ್ಟೇ ಮೌಖಿಕ ಆದೇಶ ನೀಡಿದ್ದ ಕೆಎಟಿ, ಈಗ ಲಿಖಿತ ರೂಪದ ವಿಸ್ತೃತ ಆದೇಶವನ್ನು ಪ್ರಕಟಿಸಿದೆ. ಈ ಮೂಲಕ ಸಾವಿರಾರು ಶಿಕ್ಷಕ ಆಕಾಂಕ್ಷಿಗಳ ದಶಕದ ಕಾಯುವಿಕೆಗೆ ಮತ್ತು ಕಾನೂನು ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಂತಾಗಿದೆ.








