ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಅದಕ್ಕಾಗಿ ನಿಯಮಿತ ವ್ಯಾಯಾಮ, ಪೌಷ್ಟಿಕ ಆಹಾರ ಸೇವನೆಯತ್ತ ಗಮನ ಹರಿಸುತ್ತಾರೆ. ಆದರೆ ನಮಗೆ ಅರಿವಿಲ್ಲದಂತೆಯೇ ನಾವು ಮಾಡುವ ಕೆಲವು ದೈನಂದಿನ ಸಣ್ಣಪುಟ್ಟ ತಪ್ಪುಗಳು ಅಥವಾ ಅಭ್ಯಾಸಗಳು ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಅಂತಹ ಹಾನಿಕಾರಕ ಅಭ್ಯಾಸಗಳು ಮತ್ತು ಅವುಗಳನ್ನು ಏಕೆ ಬದಲಿಸಿಕೊಳ್ಳಬೇಕು ಎಂಬ ಮಾಹಿತಿ ಇಲ್ಲಿದೆ.
1. ಮೂತ್ರ ವಿಸರ್ಜನೆಯನ್ನು ತಡೆಹಿಡಿಯುವುದು
ಅನೇಕರು ಕೆಲಸದ ಒತ್ತಡ ಅಥವಾ ಸೋಮಾರಿತನದಿಂದ ಮೂತ್ರವನ್ನು ದೀರ್ಘಕಾಲದವರೆಗೆ ತಡೆಹಿಡಿಯುತ್ತಾರೆ. ಇದು ಸಣ್ಣ ವಿಷಯವೆಂದು ಕಂಡರೂ, ಭವಿಷ್ಯದಲ್ಲಿ ಮೂತ್ರನಾಳದ ಸೋಂಕು (UTI) ಮತ್ತು ಮೂತ್ರಪಿಂಡದ ಸಮಸ್ಯೆಗಳಿಗೆ ಕಾರಣವಾಗಬಹುದು.
ಶೌಚಾಲಯದಲ್ಲಿ ಮೊಬೈಲ್ ಬಳಕೆ: ಶೌಚಾಲಯದಲ್ಲಿ ಮೊಬೈಲ್ ನೋಡುತ್ತಾ ಹೆಚ್ಚು ಹೊತ್ತು ಕುಳಿತುಕೊಳ್ಳುವುದು ಒಳ್ಳೆಯದಲ್ಲ. ಇದು ಗುದನಾಳದ ರಕ್ತನಾಳಗಳ ಮೇಲೆ ಒತ್ತಡವನ್ನು ಉಂಟುಮಾಡಿ, ಮೂಲವ್ಯಾಧಿ (Piles) ಬರುವ ಅಪಾಯವನ್ನು ಹೆಚ್ಚಿಸುತ್ತದೆ.
2. ಬಾಯಿ ತೆರೆದು ಮಲಗುವುದು
ಕೆಲವರಿಗೆ ನಿದ್ದೆಯಲ್ಲಿ ಬಾಯಿ ತೆರೆದು ಉಸಿರಾಡುವ ಅಭ್ಯಾಸವಿರುತ್ತದೆ. ಇದು ಕೇವಲ ನಿದ್ದೆಯ ಗುಣಮಟ್ಟವನ್ನು ಕಡಿಮೆ ಮಾಡುವುದಲ್ಲದೆ, ದೀರ್ಘಕಾಲದವರೆಗೆ ಹೀಗೆ ಮಾಡುವುದರಿಂದ ರಕ್ತದೊತ್ತಡ (BP), ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ತಂದೊಡ್ಡಬಹುದು.
3. ದೀರ್ಘಕಾಲ ಒಂದೇ ಕಡೆ ಕುಳಿತುಕೊಳ್ಳುವುದು
ಗಂಟೆಗಟ್ಟಲೆ ಒಂದೇ ಭಂಗಿಯಲ್ಲಿ ಕುಳಿತು ಕೆಲಸ ಮಾಡುವುದು ಬೆನ್ನು ಮತ್ತು ಕುತ್ತಿಗೆ ನೋವಿಗೆ ಪ್ರಮುಖ ಕಾರಣ. ಇದು ಕೇವಲ ಸ್ನಾಯುಗಳ ಮೇಲೆ ಮಾತ್ರವಲ್ಲದೆ, ಕೀಲುಗಳ ಆರೋಗ್ಯದ ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತದೆ. ಪ್ರತಿ ಒಂದು ಗಂಟೆಗೊಮ್ಮೆ ಸಣ್ಣ ವಿರಾಮ ತೆಗೆದುಕೊಳ್ಳುವುದು ಉತ್ತಮ.
4. ಮುಖವನ್ನು ಪದೇ ಪದೇ ಮುಟ್ಟುವುದು
ನಮ್ಮ ಕೈಗಳು ದಿನವಿಡೀ ಹತ್ತಾರು ವಸ್ತುಗಳನ್ನು ಸ್ಪರ್ಶಿಸುತ್ತವೆ, ಇದರಿಂದ ಕೈಗಳಲ್ಲಿ ಬ್ಯಾಕ್ಟೀರಿಯಾಗಳು ಸೇರಿಕೊಂಡಿರುತ್ತವೆ. ಅದೇ ಕೈಗಳಿಂದ ಮುಖವನ್ನು ಮುಟ್ಟಿಕೊಳ್ಳುವುದರಿಂದ ಚರ್ಮಕ್ಕೆ ಸೋಂಕು ತಗುಲಿ, ಮೊಡವೆ ಮತ್ತು ಅಲರ್ಜಿ ಉಂಟಾಗುವ ಸಾಧ್ಯತೆ ಇರುತ್ತದೆ.
5. ಅವಸರದಲ್ಲಿ ಆಹಾರ ಸೇವಿಸುವುದು
ತುಂಬಾ ವೇಗವಾಗಿ ಆಹಾರ ಸೇವಿಸುವ ಅಭ್ಯಾಸವಿದ್ದರೆ ಎಚ್ಚರ! ಹೀಗೆ ಮಾಡುವುದರಿಂದ ನಮಗೆ ಅರಿವಿಲ್ಲದಂತೆಯೇ ಅತಿಯಾಗಿ ತಿನ್ನುತ್ತೇವೆ (Overeating). ಇದು ಜೀರ್ಣಕ್ರಿಯೆಗೆ ಅಡ್ಡಿಪಡಿಸಿ ಅಜೀರ್ಣ ಮತ್ತು ಹೊಟ್ಟೆ ಉಬ್ಬರದಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆಹಾರವನ್ನು ಚೆನ್ನಾಗಿ ಅಗಿಯುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ.








