ಮಂಡ್ಯ: ರಾಜ್ಯಾದ್ಯಂತ ಸೂರ್ಯನ ಪ್ರಖರತೆ ಹೆಚ್ಚಾಗಿದ್ದು, ಭೀಕರ ಬೇಸಿಗೆಗೆ ಜನತೆ ಈಗಾಗಲೇ ತತ್ತರಿಸಿ ಹೋಗಿದ್ದಾರೆ. ಬಿಸಿಲಿನ ಬೇಗೆಯಿಂದ ಹೈರಾಣಾಗಿರುವ ಮಂಡ್ಯ ಮತ್ತು ಮೈಸೂರು ಭಾಗದ ಜನತೆಗೆ ಇದೀಗ ಮತ್ತೊಂದು ಆತಂಕ ಎದುರಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಜೀವನಾಡಿ ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯದ ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿದ್ದು, ಜನರಲ್ಲಿ ಭೀತಿ ಮೂಡಿಸಿದೆ.
ಒಟ್ಟು 124.80 ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯ ಹೊಂದಿರುವ ಈ ಜಲಾಶಯದಲ್ಲಿ ಸದ್ಯದ ನೀರಿನ ಮಟ್ಟ ಕೇವಲ 90 ಅಡಿಗಳಿಗೆ ಬಂದು ತಲುಪಿದೆ. ಬೇಸಿಗೆಯ ಆರಂಭದಲ್ಲೇ ನೀರಿನ ಮಟ್ಟ ಇಷ್ಟು ವೇಗವಾಗಿ ಕುಸಿಯುತ್ತಿರುವುದು ಕೃಷಿ ಚಟುವಟಿಕೆಗಳ ಮೇಲೆ ಮಾತ್ರವಲ್ಲದೆ, ದೈನಂದಿನ ಜೀವನದ ಮೇಲೂ ಗಂಭೀರ ಪರಿಣಾಮ ಬೀರುವ ಮುನ್ಸೂಚನೆ ನೀಡುತ್ತಿದೆ.
ಜಲಾಶಯದ ಒಟ್ಟು ನೀರಿನ ಸಂಗ್ರಹದ ಅಂಕಿ-ಅಂಶಗಳನ್ನು ಗಮನಿಸಿದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿರುವುದು ಕಂಡುಬರುತ್ತದೆ. ಸದ್ಯ ಡ್ಯಾಮ್‌ನಲ್ಲಿ ಇರುವುದು ಕೇವಲ 16 ಟಿಎಂಸಿ ನೀರು ಮಾತ್ರ. ಇದರಲ್ಲಿ ಹೂಳು ಮತ್ತು ತಾಂತ್ರಿಕ ಕಾರಣಗಳನ್ನು ಹೊರತುಪಡಿಸಿ, ವಾಸ್ತವಿಕವಾಗಿ ಬಳಕೆಗೆ ಲಭ್ಯವಿರುವುದು ಕೇವಲ 9 ಟಿಎಂಸಿ ನೀರು ಮಾತ್ರ ಎಂದು ಅಂದಾಜಿಸಲಾಗಿದೆ. ಈ ಲಭ್ಯವಿರುವ ನೀರು ಮಂಡ್ಯ, ಮೈಸೂರು ಮತ್ತು ಬೆಂಗಳೂರಿನಂತಹ ನಗರಗಳ ಕುಡಿಯುವ ನೀರಿನ ಅಗತ್ಯಕ್ಕೆ ಎಷ್ಟು ದಿನಗಳ ಕಾಲ ಸಾಲುತ್ತದೆ ಎಂಬ ಲೆಕ್ಕಾಚಾರದಲ್ಲಿ ಅಧಿಕಾರಿಗಳು ತೊಡಗಿದ್ದಾರೆ.
ಒಂದು ವೇಳೆ ಮುಂದಿನ ದಿನಗಳಲ್ಲಿ ವರುಣ ದೇವ ಕೃಪೆ ತೋರಿ ಮಳೆಯಾಗದಿದ್ದರೆ, ಕೇವಲ ಕೃಷಿಯಷ್ಟೇ ಅಲ್ಲದೆ ಕುಡಿಯುವ ನೀರಿಗೂ ಭಾರೀ ಹಾಹಾಕಾರ ಎದುರಾಗುವ ಸಾಧ್ಯತೆಯಿದೆ. ಕೆಆರ್‌ಎಸ್ ನಂಬಿರುವ ಸಾವಿರಾರು ಎಕರೆ ಪ್ರದೇಶದ ಬೆಳೆಗಳು ಒಣಗುವ ಭೀತಿಯಲ್ಲಿದ್ದು, ರೈತರು ಆಕಾಶದತ್ತ ಮುಖ ಮಾಡಿ ಕುಳಿತಿದ್ದಾರೆ. ಕಳೆದ ವರ್ಷದ ಮಳೆ ಕೊರತೆ ಮತ್ತು ಈ ಬಾರಿಯ ತೀವ್ರತರವಾದ ಬಿಸಿಲು ಈ ಪರಿಸ್ಥಿತಿಗೆ ಪ್ರಮುಖ ಕಾರಣವಾಗಿದೆ.
ಜಲಾಶಯದ ನೀರಿನ ಮಟ್ಟ ಸತತವಾಗಿ ಇಳಿಕೆಯಾಗುತ್ತಿರುವುದರಿಂದ ಮಂಡ್ಯ ಜಿಲ್ಲೆಯ ಜನತೆ ಅಕ್ಷರಶಃ ಆತಂಕಕ್ಕೆ ಒಳಗಾಗಿದ್ದಾರೆ. ಸರ್ಕಾರ ಮತ್ತು ಜಿಲ್ಲಾಡಳಿತವು ಲಭ್ಯವಿರುವ ನೀರನ್ನು ಅತ್ಯಂತ ಜಾಗರೂಕತೆಯಿಂದ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಮುಂದಿನ ಮಳೆಗಾಲದವರೆಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.








