ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು ಮದ್ಯದ ಮೇಲಿನ ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತಂದಿದ್ದು, ಸೋಮವಾರದಿಂದ ಹೊಸ ಅಬಕಾರಿ ನೀತಿಯನ್ನು ಜಾರಿಗೆಗೊಳಿಸಿದೆ. ಈ ಹೊಸ ನೀತಿಯು ಮದ್ಯಪ್ರಿಯರಿಗೆ ದೊಡ್ಡ ಶಾಕ್ ನೀಡಿದ್ದು, ವಿಶೇಷವಾಗಿ ಕಡಿಮೆ ದರದ ಮದ್ಯದ ಬೆಲೆ ಗಣನೀಯವಾಗಿ ಏರಿಕೆಯಾಗಲಿದೆ.
ಕಳೆದ 6 ದಶಕಗಳಿಂದ ಜಾರಿಯಲ್ಲಿದ್ದ ‘ಬಲ್ಕ್ ಲೀಟರ್’ ಆಧಾರಿತ ತೆರಿಗೆ ವ್ಯವಸ್ಥೆಯನ್ನು ಕೈಬಿಟ್ಟು, ಈಗ ‘ಅಲ್ಕೋಹಾಲ್ ಇನ್ ಬೇವರೇಜ್’ (ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣ) ಆಧಾರಿತ ತೆರಿಗೆಯನ್ನು ಅಳವಡಿಸಲಾಗಿದೆ.ಈ ಹಿಂದೆ ಇದ್ದ 16 ಅಬಕಾರಿ ಸ್ಲ್ಯಾಬ್ಗಳನ್ನು ಕಡಿತಗೊಳಿಸಿ ಕೇವಲ 8 ಸ್ಲ್ಯಾಬ್ಗಳಿಗೆ ಸೀಮಿತಗೊಳಿಸಲಾಗಿದೆ.
180 ಮಿಲಿ ಟೆಟ್ರಾ ಪ್ಯಾಕ್ಗಳ ವಿಸ್ಕಿ, ರಮ್, ಬ್ರಾಂಡಿ, ಜಿನ್ ಮತ್ತು ವೋಡ್ಕಾ ಬೆಲೆಯು ಕನಿಷ್ಠ ಶೇ. 20ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಒಂದು ಕಡೆ ಸಾಮಾನ್ಯ ಮದ್ಯದ ಬೆಲೆ ಏರಿಕೆಯಾಗುತ್ತಿದ್ದರೆ, ಮತ್ತೊಂದೆಡೆ ವಿದೇಶಿ ಅಥವಾ ಪ್ರೀಮಿಯಂ ಮದ್ಯದ ಬ್ರ್ಯಾಂಡ್ಗಳ ಬೆಲೆ ಶೇ. 16ರಿಂದ ಶೇ. 20ರಷ್ಟು ಇಳಿಕೆಯಾಗುವ ಸಾಧ್ಯತೆಯಿದೆ.
ಸರ್ಕಾರದ ಈ ನಿರ್ಧಾರದಿಂದ ಬಹುರಾಷ್ಟ್ರೀಯ ಪ್ರೀಮಿಯಂ ಬ್ರ್ಯಾಂಡ್ಗಳಿಗೆ ಲಾಭವಾಗಲಿದ್ದು, ಸ್ಥಳೀಯ ಡಿಸ್ಟಿಲರಿಗಳು ಮತ್ತು ಪ್ರಾದೇಶಿಕ ಮದ್ಯ ಉತ್ಪಾದಕರಿಗೆ ಹಿನ್ನಡೆಯಾಗುವ ಭೀತಿ ಎದುರಾಗಿದೆ. ಇದು ಸ್ಥಳೀಯ ಹೂಡಿಕೆ ಮತ್ತು ಉದ್ಯೋಗಾವಕಾಶಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ಉದ್ಯಮ ವಲಯ ಆತಂಕ ವ್ಯಕ್ತಪಡಿಸಿದೆ. ಒಟ್ಟಾರೆಯಾಗಿ, ರಾಜ್ಯ ಸರ್ಕಾರವು ಆದಾಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಈ ಹೊಸ ‘ಕರ್ನಾಟಕ ಅಬಕಾರಿ ನಿಯಮಗಳು-2026’ ಅನ್ನು ಅಂತಿಮಗೊಳಿಸಿ ಜಾರಿಗೆ ತಂದಿದೆ.








