ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡಗಳು ಕವಿದಿರುವ ಹಿನ್ನೆಲೆಯಲ್ಲಿ, ದೇಶದ ಇಂಧನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಭಾರತ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಇರಾನ್ ಬಿಕ್ಕಟ್ಟಿನಿಂದ ಉಂಟಾಗಬಹುದಾದ ತೈಲ ಕೊರತೆಯನ್ನು ನೀಗಿಸಲು ಭಾರತವು ಈಗ ಕೇವಲ ಒಂದು ವಲಯವನ್ನು ನಂಬಿಕೊಳ್ಳದೆ, ವಿವಿಧ ದೇಶಗಳಿಂದ ತೈಲ ಆಮದು ಮಾಡಿಕೊಳ್ಳಲು ಮಾತುಕತೆ ನಡೆಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತಿಳಿಸಿದೆ.
ಭಾರತವು ತನ್ನ ಕಚ್ಚಾ ತೈಲದ ಅವಶ್ಯಕತೆಗಾಗಿ ರಷ್ಯಾ, ಬ್ರೆಜಿಲ್ ಮತ್ತು ಆಫ್ರಿಕಾದ ರಾಷ್ಟ್ರಗಳೊಂದಿಗೆ ಸಂಪರ್ಕ ಸಾಧಿಸುತ್ತಿದೆ. ಇರಾನ್‌ನಂತಹ ಪ್ರಮುಖ ಪೂರೈಕೆದಾರ ರಾಷ್ಟ್ರಗಳಲ್ಲಿ ಅಸ್ಥಿರತೆ ಉಂಟಾದರೂ, ದೇಶದ ತೈಲ ಸಂಗ್ರಹದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ.
ವಿಶ್ವದ ಒಟ್ಟು ತೈಲ ಸಾಗಣೆಯ ಶೇ. 20 ರಷ್ಟು ಭಾಗ ಹಾರ್ಮುಜ್ ಜಲಸಂಧಿಯ ಮೂಲಕವೇ ನಡೆಯುತ್ತದೆ. ಇರಾನ್ ಈ ಮಾರ್ಗವನ್ನು ಬಂದ್ ಮಾಡಬಹುದು ಎಂಬ ಭೀತಿಯ ಹಿನ್ನೆಲೆಯಲ್ಲಿ, ಪರ್ಯಾಯ ಮಾರ್ಗಗಳ ಮೂಲಕ ಇಂಧನ ತರಿಸಿಕೊಳ್ಳುವ ಬಗ್ಗೆ ಭಾರತ ಯೋಜನೆ ರೂಪಿಸುತ್ತಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪೆಟ್ರೋಲಿಯಂ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಮತ್ತು ಪೂರೈಕೆಯ ಮೇಲೆ ಸೂಕ್ಷ್ಮವಾಗಿ ನಿಗಾ ಇರಿಸಿದೆ.








