ಅಸ್ಸಾಂ : ಹಿಮಂತ ಬಿಸ್ವ ಶರ್ಮಾ ಅವರು ಎರಡನೇ ಬಾರಿಗೆ ಅಸ್ಸಾಂ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ. ನಿನ್ನೆ ನಡೆದ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರನ್ನು ಸರ್ವಾನುಮತದಿಂದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಅಸ್ಸಾಂನಲ್ಲಿ ಬಿಜೆಪಿಯನ್ನು ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ತರುವಲ್ಲಿ ಶರ್ಮಾ ಪ್ರಮುಖ ಪಾತ್ರ ವಹಿಸಿದ್ದರು. ಮೇ 12ರಂದು ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಅಸ್ಸಾಮ್ ರಾಜಧಾನಿ ಗುವಾಹಟಿಯಲ್ಲಿ ಭಾನುವಾರ ನಡೆದ ಪ್ರಮುಖ ಸಭೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಾದ ಎಜಿಪಿ (AGP) ಮತ್ತು ಯುಪಿಪಿಎಲ್ (UPPL) ಶಾಸಕರು ಶರ್ಮಾ ಅವರನ್ನು ತಮ್ಮ ನಾಯಕನೆಂದು ಘೋಷಿಸಿದರು. ಅಸ್ಸಾಂನಲ್ಲಿ ಬಿಜೆಪಿಯನ್ನು ಸತತವಾಗಿ ಎರಡನೇ ಬಾರಿಗೆ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶರ್ಮಾ ಅವರಿಗೆ ಹೈಕಮಾಂಡ್ ಮತ್ತೊಮ್ಮೆ ಮನ್ನಣೆ ನೀಡಿದೆ.
ಇತ್ತೀಚೆಗೆ ನಡೆದ ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು ಸ್ಪಷ್ಟ ಬಹುಮತವನ್ನು ಪಡೆದುಕೊಂಡಿತ್ತು. 126 ಕ್ಷೇತ್ರಗಳ ಪೈಕಿ ಎನ್‌ಡಿಎ 102 ಸ್ಥಾನ ಗಳಿಸಿತು. ಈ ಮೈತ್ರಿಕೂಟದಲ್ಲಿ ಬಿಜೆಪಿಯೊಂದೇ 82 ಸ್ಥಾನ ಪಡೆದಿದೆ. ಎಜಿಪಿ ಮತ್ತು ಬಿಒಪಿಎಫ್ ತಲಾ 20 ಸ್ಥಾನ ಗಳಿಸಿವೆ. ನಾಳೆ ನಡೆಯುವ ಈ ಕಾರ್ಯಕ್ರಮದೊಂದಿಗೆ ಅಸ್ಸಾಂನಲ್ಲಿ ಹೊಸ ಸರ್ಕಾರದ ಆಡಳಿತ ಅಧಿಕೃತವಾಗಿ ಆರಂಭವಾಗಲಿದೆ.








