ಮೈಸೂರು : ಮೈಸೂರಲ್ಲಿ ಅಮಾನವೀಯ ಘಟನೆ ನಡೆದಿದ್ದು, ಹಣದಾಸೆಗೆ ವೃದ್ಧೆಯನ್ನು ಕೊಲೆ ಮಾಡಿ, ಶವವನ್ನು ಶೌಚಾಲಯದ ಒಳಚರಂಡಿ ಗುಂಡಿಯಲ್ಲಿ ಹಾಕಿರುವ ಘಟನೆ ಮೈಸೂರಿನ ಕೆ.ಆರ್. ನಗರ ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ನಡೆದಿದೆ. ತಿಪ್ಪೂರು ಗ್ರಾಮದ ಲೇಟ್ ಮೂಡ್ಲಶೆಟ್ಟಿ ಅವರ ಪತ್ನಿ ಗೌರಮ್ಮ (90) ಕೊಲೆಯಾದ ವೃದ್ಧೆ. ಅದೇ ಗ್ರಾಮದ ವೀರಭದ್ರ ಕೊಲೆ ಆರೋಪಿಯಾಗಿದ್ದಾನೆ ಎನ್ನಲಾಗಿದೆ.
ಕೊಲೆಯಾದ ವೃದ್ಧೆಗೆ ಮೂವರು ಗಂಡು ಮಕ್ಕಳು ಹಾಗೂ ಒರ್ವ ಪುತ್ರಿ ಇದ್ದು, ಮೂವರು ಕೂಡ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. ವೃದ್ಧೆ ಗೌರಮ್ಮಳಿಗೆ ವೀರಭದ್ರ ತೀರ ಪರಿಚಿತನಾಗಿದ್ದು, ಬಹಳಷ್ಟು ವಿಶ್ವಾಸ ಗಳಿಸಿದ್ದ. ಆದ್ದರಿಂದ ಗೌರಮ್ಮ ಅವರ ಬ್ಯಾಂಕ್ ಖಾತೆಯಲ್ಲಿನ ಹಣ ಡ್ರಾ ಮಾಡುವುದು, ಇತರೆ ಕೆಲಸವನ್ನು ಮಾಡಿಕೊಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
15 ದಿನಗಳ ಹಿಂದೆ ಗೌರಮ್ಮ ವೀರಭದ್ರನ ಜೊತೆ ಬ್ಯಾಂಕ್ಗೆ ಹೋಗಿ 75 ಸಾವಿರ ಹಣ ಡ್ರಾ ಮಾಡಿಕೊಂಡಿದ್ದರು. ಬಳಿಕ ತುರ್ತಾಗಿ ಹಣಬೇಕು ಕೊಡಿ ಎಂದು ಗೌರಮ್ಮರ ಬಳಿ ಇದ್ದ 75 ಸಾವಿರ ಹಣವನ್ನು ಆರೋಪಿ ಪಡೆದಿದ್ದ. ವಾರ ಕಳೆದ ನಂತರ ಗೌರಮ್ಮ ಹಣ ಕೊಡು ಎಂದು ಕೇಳಿದಾಗ ಕೊಡುತ್ತೇನೆ ಎಂದು ಸಬೂಬು ಹೇಳಿ ರಾತ್ರಿ ವೇಳೆ ವೃದ್ಧೆ ಮನೆಗೆ ಹೋಗಿ ಕಪಾಳಕ್ಕೆ ಹೊಡೆದು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ನಂತರ ಮೃತದೇಹವನ್ನು ಮನೆಯ ಹಿಂದೆ ಇರುವ ಶೌಚಾಲಯದ ಯುಜಿಡಿ ಗುಂಡಿಗೆ ಹಾಕಿ ಪರಾರಿಯಾಗಿದ್ದ.
ಗೌರಮ್ಮ ಕಾಣದಿರುವ ಬಗ್ಗೆ ಮಕ್ಕಳು ಹುಡುಕಾಟ ನಡೆಸಿದ್ದರು. ಇದೇ ವೇಳೆ ವೀರಭದ್ರ ಕೂಡ ಗ್ರಾಮದಿಂದ ನಾಪತ್ತೆಯಾಗಿದ್ದ. ಇದರಿಂದ ಅನುಮಾನಗೊಂಡ ಗೌರಮ್ಮನ ಮಕ್ಕಳು ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ತನಿಖೆ ಆರಂಭಿಸಿದ ಪೊಲೀಸರು ವೀರಭದ್ರ ಗ್ರಾಮಕ್ಕೆ ಬಂದ ನಂತರ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದರು. ಈ ವೇಳೆ ಹಣಕ್ಕಾಗಿ ಗೌರಮ್ಮ ಅವರನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡು, ಶವವನ್ನು ಶೌಚಾಲಯದ ಯುಜಿಡಿ ಗುಂಡಿಯಲ್ಲಿ ಹಾಕಿರುವುದಾಗಿ ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ








