ಬೆಂಗಳೂರು : ಬೆಂಗಳೂರಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದ ರೀಲ್ಸ್ ಮಾಡುವ ಮಹಿಳೆಯ ಜೊತೆ ಬೆಂಗಳೂರಿನ ಶ್ರೀಗಂಧನಗರದಲ್ಲಿ ಲಿವಿನ್ ರಿಲೇಷನ್ ಶಿಪ್‌ನಲ್ಲಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ಚಿತ್ರದುರ್ಗ ಮೂಲದ ತಿಪ್ಪೇಸ್ವಾಮಿ (28) ಎಂದು ಗುರುತಿಸಲಾಗಿದೆ. ಸದ್ಯ ನಾಪತ್ತೆಯಾಗಿರುವ ಮಹಿಳೆಗಾಗಿ ರಾಜಗೋಪಾಲನಗರ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ತಿಪ್ಪೇಸ್ವಾಮಿ ಹಾಗೂ ದಾವಣಗೆರೆ ಮೂಲದ ಮಹಿಳೆಯೊಬ್ಬರಿಗೆ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿತ್ತು. ಈಕೆ ರೀಲ್ಸ್ ಮಾಡುವುದರಲ್ಲಿ ಸಕ್ರಿಯಳಾಗಿದ್ದು, ಇಬ್ಬರೂ ಒಂದೇ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಪತಿ ಮತ್ತು ಇಬ್ಬರು ಮಕ್ಕಳನ್ನು ಬಿಟ್ಟು ಬಂದಿದ್ದ ಈಕೆ, ಕಳೆದ ಎರಡು ತಿಂಗಳಿನಿಂದ ತಿಪ್ಪೇಸ್ವಾಮಿ ಜೊತೆ ಶ್ರೀಗಂಧನಗರದ ಬಾಡಿಗೆ ಮನೆಯಲ್ಲಿ ಲಿವಿನ್ ರಿಲೇಷನ್ಶಿಪ್ನಲ್ಲಿದ್ದಳು. ಮನೆ ಮಾಲೀಕರಿಗೆ ತಾವು ದಂಪತಿಗಳೆಂದು ಸುಳ್ಳು ಹೇಳಿ ವಾಸವಿದ್ದರು ಎನ್ನಲಾಗಿದೆ.
ನನ್ನನ್ನು ಮೇಂಟೇನ್ ಮಾಡಲು ನಿನ್ನಿಂದ ಸಾಧ್ಯವಿಲ್ಲ, ನನ್ನನ್ನು ಬಿಟ್ಟು ಹೋಗು ಎಂದು ಮಹಿಳೆ ತಿಪ್ಪೇಸ್ವಾಮಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಮನನೊಂದ ತಿಪ್ಪೇಸ್ವಾಮಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನ ಕುಟುಂಬಸ್ಥರು ಮಹಿಳೆಯ ಕಿರುಕುಳವೇ ಸಾವಿಗೆ ನೇರ ಕಾರಣ ಎಂದು ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.








