ಶಿವಮೊಗ್ಗ: ಮದುವೆ ದಿಬ್ಬಣ ಹೊತ್ತೊಯ್ಯುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಸೊರಬ ತಾಲೂಕಿನ ಕುಪ್ಪಗಡ್ಡೆ ಗ್ರಾಮದ ಕೊಡಕೋಡು ಕ್ರಾಸ್ ಸಮೀಪದ ಇಪ್ಪಿನ ಕೆರೆ ಏರಿ ಮೇಲೆ ಶನಿವಾರ ನಡೆದಿದೆ.
ಘಟನೆಯ ವಿವರ:
ಸಿದ್ದಾಪುರದಿಂದ ಹಾನಗಲ್‌ಗೆ ವಿವಾಹ ಸಮಾರಂಭವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದ ಖಾಸಗಿ ಬಸ್, ಆನವಟ್ಟಿ – ಸೊರಬ ಮಾರ್ಗವಾಗಿ ಸಂಚರಿಸುತ್ತಿತ್ತು. ಕುಪ್ಪಗಡ್ಡೆ ಗ್ರಾಮದ ಇಪ್ಪಿನ ಕೆರೆ ಏರಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಬಸ್ ರಸ್ತೆ ಬದಿಯ ಗದ್ದೆಗೆ ಮಗುಚಿ ಬಿದ್ದಿದೆ.
ಪ್ರಾಾಣಾಪಾಯದಿಂದ ಪಾರಾದ ಪ್ರಯಾಣಿಕರು:
ಅಪಘಾತದ ಸಂಭವಿಸಿದಾಗ ಬಸ್‌ನಲ್ಲಿ ಸುಮಾರು 50 ಮಂದಿ ಪ್ರಯಾಣಿಕರಿದ್ದರು. ಘಟನೆ ನಡೆದ ಕೂಡಲೇ ಸ್ಥಳೀಯರು ಧಾವಿಸಿ ಬಸ್‌ನಲ್ಲಿದ್ದವರನ್ನು ಹೊರತರಲು ನೆರವಾದರು. ಕೆರೆ ಪಕ್ಕದಲ್ಲಿದ್ದ ತಡೆ ಕಲ್ಲುಗಳು ಬಸ್‌ನ ವೇಗವನ್ನು ನಿಯಂತ್ರಿಸಿದ್ದರಿಂದ ಬಸ್ ಕೆರೆಗೆ ಉರುಳದೆ ದೊಡ್ಡ ಮಟ್ಟದ ದುರಂತವೊಂದು ತಪ್ಪಿದಂತಾಗಿದೆ.
ಗಾಯಾಳುಗಳ ವಿವರ:
ಅಪಘಾತದಲ್ಲಿ ಮೂವರು ಪ್ರಯಾಣಿಕರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಉಳಿದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಕೂಡಲೇ ಹಾನಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸಾರ್ವಜನಿಕರ ಆಕ್ರೋಶ:
ಈ ಭಾಗದಲ್ಲಿ ರಸ್ತೆ ಇಳಿಜಾರಿನಿಂದ ಕೂಡಿದ್ದು, ಇಲ್ಲಿನ ತಿರುವು ಅತ್ಯಂತ ಅಪಾಯಕಾರಿಯಾಗಿದೆ. ನಿರಂತರ ಅಪಘಾತಗಳು ಸಂಭವಿಸುತ್ತಿದ್ದರೂ ಸಹ ಇಲ್ಲಿ ಯಾವುದೇ ಸೂಚನಾ ಫಲಕ ಅಥವಾ ವೇಗ ನಿಯಂತ್ರಕಗಳನ್ನು ಅಳವಡಿಸಿಲ್ಲ ಎಂದು ಲೋಕೋಪಯೋಗಿ ಇಲಾಖೆಯ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಆನವಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.








