ಶೃಂಗಾರ ಮತ್ತು ಭಾವನಾತ್ಮಕ ಪ್ರೀತಿ ಎನ್ನುವುದು ಕೇವಲ ಯೌವನಕ್ಕೆ ಮಾತ್ರ ಸೀಮಿತ ಎಂಬ ತಪ್ಪು ಕಲ್ಪನೆ ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿದೆ. ವಯಸ್ಸಾದ ಮೇಲೆ ಮೊಮ್ಮಕ್ಕಳೊಂದಿಗೆ ಆಟವಾಡುತ್ತಾ ಕಾಲ ಕಳೆಯುವುದಷ್ಟೇ ಜೀವನ ಎಂದು ಅನೇಕರು ಭಾವಿಸುತ್ತಾರೆ. ವಯಸ್ಸಾದ ದಂಪತಿಗಳು ಕೈ ಹಿಡಿದು ನಡೆದರೆ ನೋಡುವುದಕ್ಕೆ ಚೆಂದ ಎಂದು ಮುರಿಬೀಳುವ ಜನ, ಅವರ ನಡುವೆ ದೈಹಿಕ ಸಾನ್ನಿತ್ಯವಿದೆ ಎಂದರೆ ಮಾತ್ರ ಅದನ್ನೊಂದು ಮುಜುಗರದ ವಿಷಯವಾಗಿ ನೋಡುತ್ತಾರೆ.
ಆದರೆ, ಸುಕ್ಕುಗಟ್ಟಿದ ಚರ್ಮ ಅಥವಾ ಬೆಳ್ಳಗಾದ ಕೂದಲು ಪ್ರೀತಿಗೆ ಎಂದಿಗೂ ಅಡ್ಡಿಯಾಗುವುದಿಲ್ಲ. ಮನಸ್ಸಿನಲ್ಲಿ ಪ್ರೀತಿ ಮತ್ತು ಆತ್ಮೀಯತೆ ಇದ್ದರೆ ಜೀವನದ ಎರಡನೇ ಇನ್ನಿಂಗ್ಸ್ನಲ್ಲೂ ಶೃಂಗಾರವು ಒಂದು ಅದ್ಭುತ ಕಾವ್ಯವಾಗಬಲ್ಲದು. 60 ಅಥವಾ 70ರ ಹರೆಯದಲ್ಲೂ ದೈಹಿಕ ಸಾನ್ನಿತ್ಯವು ದಂಪತಿಗಳಿಗೆ ನೆಮ್ಮದಿ ಮತ್ತು ಆನಂದವನ್ನು ನೀಡುತ್ತದೆ. ಈ ಸುಖವನ್ನು ಅನುಭವಿಸಲು ತಜ್ಞರು ಈ ಕೆಳಗಿನ 5 ಪ್ರಮುಖ ಸಲಹೆಗಳನ್ನು ನೀಡಿದ್ದಾರೆ.
1. ನಿಧಾನ ಮತ್ತು ಮೃದುತ್ವಕ್ಕೆ ಆದ್ಯತೆ
ವಯಸ್ಸಾಗುತ್ತಿದ್ದಂತೆ ದೈಹಿಕವಾಗಿ ಸ್ಪಂದಿಸುವ ವೇಗ ಕಡಿಮೆಯಾಗುವುದು ಸಹಜ. ವಿಶೇಷವಾಗಿ ಮಹಿಳೆಯರಲ್ಲಿ ಈ ಬದಲಾವಣೆ ಹೆಚ್ಚು ಕಂಡುಬರುತ್ತದೆ. ಆದ್ದರಿಂದ, ಲೈಂಗಿಕ ಕ್ರಿಯೆಯನ್ನು ಅತ್ಯಂತ ನಿಧಾನವಾಗಿ ಮತ್ತು ಮೃದುವಾಗಿ ಆರಂಭಿಸಬೇಕು. ಹೆಚ್ಚಿನ ಸಮಯವನ್ನು ‘ಫೋರ್ ಪ್ಲೇ’ (Foreplay) ಗಾಗಿ ಮೀಸಲಿಡುವುದರಿಂದ ಉತ್ಸಾಹ ಹೆಚ್ಚುತ್ತದೆ. ಅಲ್ಲದೆ, ರಾತ್ರಿ ವೇಳೆ ಕೀಲು ನೋವು ಅಥವಾ ಇತರ ಆರೋಗ್ಯ ಸಮಸ್ಯೆಗಳು ಕಾಡಬಹುದು. ಹಾಗಾಗಿ, ಮುಂಜಾನೆ ಅಥವಾ ಮಧ್ಯಾಹ್ನದ ಏಕಾಂತದ ಸಮಯವನ್ನು ಆರಿಸಿಕೊಳ್ಳುವುದು ಉತ್ತಮ.
2. ಸೌಕರ್ಯವೇ ಎಲ್ಲಕ್ಕಿಂತ ಮುಖ್ಯ
ಈ ವಯಸ್ಸಿನಲ್ಲಿ ಪರಿಸರ ಮತ್ತು ಸೌಕರ್ಯ ಬಹಳ ಮುಖ್ಯ. ನಿಮ್ಮ ಮಲಗುವ ಕೋಣೆ ಪ್ರಶಾಂತವಾಗಿರಲಿ ಮತ್ತು ಹಾಸಿಗೆ ಆರಾಮದಾಯಕವಾಗಿರಲಿ. ದೈಹಿಕವಾಗಿ ಶ್ರಮವಾಗದಂತೆ ಮೃದುವಾದ ದಿಂಬುಗಳನ್ನು ಬಳಸಿ. ದೇಹಕ್ಕೆ ಯಾವುದೇ ನೋವು ಅಥವಾ ಅಸ್ವಸ್ಥತೆ ಉಂಟಾಗದಂತೆ ನೋಡಿಕೊಂಡಾಗ ಮಾತ್ರ ಸಾನ್ನಿತ್ಯವು ತೃಪ್ತಿ ನೀಡುತ್ತದೆ.
3. ಆನ್ಲೈನ್ ಶಾಪಿಂಗ್ ಮೂಲಕ ಗೌಪ್ಯತೆ
ವಯಸ್ಸಾದಂತೆ ಮಹಿಳೆಯರಲ್ಲಿ ಯೋನಿ ಭಾಗವು ಒಣಗುವ (Vaginal dryness) ಸಮಸ್ಯೆ ಕಾಣಿಸಿಕೊಳ್ಳಬಹುದು. ಇದು ದೈಹಿಕ ಸಂಪರ್ಕದ ವೇಳೆ ನೋವು ಉಂಟುಮಾಡಬಹುದು. ಇದನ್ನು ತಡೆಗಟ್ಟಲು ‘ಲೂಬ್ರಿಕೆಂಟ್ಸ್’ (Lubricants) ಬಳಸುವುದು ಅತ್ಯುತ್ತಮ ಮಾರ್ಗ. ಆದರೆ ಅಂಗಡಿಗಳಿಗೆ ಹೋಗಿ ಇವುಗಳನ್ನು ಖರೀದಿಸಲು ಮುಜುಗರ ಪಡುವವರು ಆನ್ಲೈನ್ ಶಾಪಿಂಗ್ ಮೊರೆ ಹೋಗಬಹುದು. ಇದು ನಿಮ್ಮ ಗೌಪ್ಯತೆಯನ್ನು ಕಾಪಾಡುತ್ತದೆ.
4. ಸ್ಪರ್ಶದ ಹೊಸ ಭಾಷೆ
ಯೌವನದಲ್ಲಿದ್ದಷ್ಟು ವೇಗವಾಗಿ ವಯಸ್ಸಾದ ಮೇಲೆ ಪುರುಷರಲ್ಲಿ ಲೈಂಗಿಕ ಪ್ರಚೋದನೆ ಉಂಟಾಗದಿರಬಹುದು. ಅಂತಹ ಸಮಯದಲ್ಲಿ ಲೈಂಗಿಕತೆಯನ್ನು ಕೇವಲ ದೈಹಿಕ ಕ್ರಿಯೆಯಾಗಿ ನೋಡದೆ, ಪ್ರೀತಿಯ ಸಂಕೇತವಾಗಿ ನೋಡಿ. ಪರಸ್ಪರ ಅಪ್ಪಿಕೊಳ್ಳುವುದು, ಮೃದುವಾಗಿ ಕೈ ಹಿಡಿಯುವುದು ಅಥವಾ ಮುತ್ತಿಡುವುದರ ಮೂಲಕ ಹೊಸ ಪ್ರೇಮ ಭಾಷೆಯನ್ನು ಸೃಷ್ಟಿಸಿಕೊಳ್ಳಿ. ಈ ಸ್ಪರ್ಶವು ನಿಮ್ಮ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.
5. ಆತ್ಮವಿಶ್ವಾಸವೇ ದೊಡ್ಡ ಆಯುಧ
ಯಾವುದೇ ವಯಸ್ಸಿನಲ್ಲಾದರೂ ಲೈಂಗಿಕ ಜೀವನ ಯಶಸ್ವಿಯಾಗಲು ಆತ್ಮವಿಶ್ವಾಸ ಮುಖ್ಯ. “ನಾನು ಇಂದಿಗೂ ನನ್ನ ಸಂಗಾತಿಯನ್ನು ಸಂತೋಷವಾಗಿಡಬಲ್ಲೆ” ಎಂಬ ಸಕಾರಾತ್ಮಕ ಆಲೋಚನೆ ನಿಮ್ಮನ್ನು ಮಾನಸಿಕವಾಗಿ ಸದೃಢಗೊಳಿಸುತ್ತದೆ. ನಿಮ್ಮಲ್ಲಿ ನಂಬಿಕೆಯಿದ್ದರೆ, ವಯಸ್ಸು ಎಂಬುದು ಕೇವಲ ಒಂದು ಸಂಖ್ಯೆಯಷ್ಟೇ ಹೊರತು ಅದು ಪ್ರೀತಿಗೆ ಅಡ್ಡಿಯಾಗುವುದಿಲ್ಲ.








