ಮೈಸೂರು : ಭಾರತದ ಸರ್ವತೋಮುಖ ಪ್ರಗತಿಗೆ ಸಾಮಾಜಿಕ ಸಾಮರಸ್ಯ ಮತ್ತು ಭಾವನಾತ್ಮಕ ಏಕೀಕರಣ ಅತ್ಯಗತ್ಯ. ದೇಶದ ಪ್ರಗತಿಗೆ ಸಾಮಾಜಿಕ ಸಾಮರಸ್ಯವೇ ಅಡಿಪಾಯ. ಹಾಗಾಗಿ ಏಕರೂಪ ನಾಗರೀಕ ಸಂಹಿತೆ ಶೀಘ್ರದಲ್ಲೇ ಜಾರಿಯಾಗುವ ಬಗ್ಗೆ RSS ಮುಖ್ಯಸ್ಥ ಮೋಹನ್ ಭಾಗವತ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಜೆಎಸ್‌ಎಸ್ ಮಹಾವಿದ್ಯಾಪೀಠದ ಸುವರ್ಣ ಮಹೋತ್ಸವ ಉಪನ್ಯಾಸ ಮಾಲಿಕೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ‘ರಾಷ್ಟ್ರದ ಅಭಿವೃದ್ಧಿಗೆ ಸಾಮಾಜಿಕ ಸಾಮರಸ್ಯವೇ ಪ್ರೇರಕ ಶಕ್ತಿ’ ಎಂಬ ವಿಷಯದ ಕುರಿತು ಅವರು ಗುರುವಾರ ವಿಶೇಷ ಉಪನ್ಯಾಸ ನೀಡಿದರು. ಸಮಾಜವು ಜಾತಿ ಮತ್ತು ಧರ್ಮದ ಸಂಕುಚಿತ ಮನೋಭಾವದಿಂದ ಹೊರಬರಬೇಕು ಎಂದು ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.
ಜನಸಂಖ್ಯಾ ನೀತಿಯ ಕುರಿತು ಮಾತನಾಡಿದ ಮೋಹನ್ ಭಾಗವತ್, ಸರ್ಕಾರವು ಮುಂದಿನ ನೂರು ವರ್ಷಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ದೀರ್ಘಾವಧಿಯ ನೀತಿಗಳನ್ನು ರೂಪಿಸಬೇಕು. ಜನಸಂಖ್ಯಾ ಅಸಮತೋಲನವು ದೊಡ್ಡ ಸವಾಲಾಗಿದ್ದು, ಯಾವುದೇ ತಾರತಮ್ಯವಿಲ್ಲದೆ ಇದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು. ಇನ್ನು ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ನಿರ್ಧಾರಗಳು ಸಾಮೂಹಿಕವಾಗಿ ರೂಪುಗೊಳ್ಳಬೇಕಾದ್ದರಿಂದ ತಾಳ್ಮೆ ಅಗತ್ಯ. ಯುಸಿಸಿ ಶೀಘ್ರದಲ್ಲೇ ದೇಶಾದ್ಯಂತ ಜಾರಿಯಾಗುವ ಆಶಾವಾದ ಇದೆ ಎಂದರು.








