ನವದೆಹಲಿ: ಅಟ್ಲಾಂಟಿಕ್ ಸಾಗರದಲ್ಲಿ ಸಾಗುತ್ತಿರುವ ಐಷಾರಾಮಿ ಪ್ರವಾಸಿ ಹಡಗೊಂದರಲ್ಲಿ ಭೀಕರ ‘ಹಂತಾವೈರಸ್’ (Hantavirus) ಕಾಣಿಸಿಕೊಂಡಿದ್ದು, ಇಬ್ಬರು ಭಾರತೀಯ ಸಿಬ್ಬಂದಿಗಳು ಸೇರಿದಂತೆ ಒಟ್ಟು 149 ಮಂದಿ ಹಡಗಿನಲ್ಲೇ ಸಿಲುಕಿಕೊಂಡಿದ್ದಾರೆ. ಈ ಮಾರಣಾಂತಿಕ ವೈರಸ್‌ಗೆ ಈಗಾಗಲೇ ಮೂವರು ಬಲಿಯಾಗಿದ್ದು, ಎಂಟು ಮಂದಿಗೆ ಸೋಂಕು ದೃಢಪಟ್ಟಿದೆ.
ಅರ್ಜೆಂಟೀನಾದಿಂದ ಹೊರಟಿದ್ದ ಈ ಹಡಗಿನಲ್ಲಿ ಏಪ್ರಿಲ್ 11 ರಂದು ಮೊದಲ ಸಾವು ಸಂಭವಿಸಿತ್ತು. ನೆದರ್ಲೆಂಡ್ಸ್ ಮೂಲದ ದಂಪತಿ ಹಾಗೂ ಓರ್ವ ಜರ್ಮನ್ ಪ್ರಜೆ ಈ ಸೋಂಕಿಗೆ ಬಲಿಯಾಗಿದ್ದಾರೆ. ಸದ್ಯ ಹಡಗು ಸ್ಪೇನ್‌ನ ಕ್ಯಾನರಿ ದ್ವೀಪಗಳತ್ತ ಸಾಗುತ್ತಿದ್ದು, ಶನಿವಾರ ಅಥವಾ ಭಾನುವಾರ ಅಲ್ಲಿಗೆ ತಲುಪುವ ನಿರೀಕ್ಷೆಯಿದೆ.
ಸೋಂಕು ಪತ್ತೆಯಾಗುವ ಮುನ್ನವೇ ಹಡಗಿನಿಂದ ಇಳಿದು ವಿವಿಧ ದೇಶಗಳಿಗೆ ತೆರಳಿದ ಪ್ರಯಾಣಿಕರನ್ನು ಪತ್ತೆಹಚ್ಚಲು ನಾಲ್ಕು ಖಂಡಗಳ ಆರೋಗ್ಯ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.
ಸಿಂಗಾಪುರ: ಹಡಗಿನಿಂದ ಇಳಿದು ಬಂದಿದ್ದ ಇಬ್ಬರು ವ್ಯಕ್ತಿಗಳನ್ನು ಪ್ರತ್ಯೇಕವಾಗಿ ಇರಿಸಿ ಪರೀಕ್ಷಿಸಲಾಗುತ್ತಿದೆ.
ಸೋಂಕಿತ ಮಹಿಳೆಯೊಬ್ಬರು ಪ್ರಯಾಣಿಸಿದ್ದ ವಿಮಾನದ ಸಿಬ್ಬಂದಿಗಳಲ್ಲಿ ರೋಗಲಕ್ಷಣ ಕಾಣಿಸಿಕೊಂಡಿದ್ದು, ಆಮ್ಸ್ಟರ್‌ಡ್ಯಾಮ್‌ನಲ್ಲಿ ಅವರನ್ನು ಐಸೊಲೇಷನ್‌ನಲ್ಲಿ ಇಡಲಾಗಿದೆ.
ಫ್ರಾನ್ಸ್ ಮತ್ತು ಸ್ವಿಟ್ಜರ್ಲೆಂಡ್: ಇಲ್ಲಿಯೂ ಕೆಲವು ಶಂಕಿತ ಪ್ರಕರಣಗಳು ವರದಿಯಾಗಿದ್ದು, ವೈದ್ಯಕೀಯ ತಪಾಸಣೆ ನಡೆಯುತ್ತಿದೆ.








