ತೆಹ್ರಾನ್:ಮಧ್ಯಪ್ರಾಚ್ಯದಲ್ಲಿ ತಲೆದೂರಿರುವ ಭೀಕರ ಯುದ್ಧದ ವಾತಾವರಣವನ್ನು ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಳುಹಿಸಿರುವ ಶಾಂತಿ ಪ್ರಸ್ತಾವನೆಯನ್ನು ಪರಿಶೀಲಿಸುತ್ತಿರುವುದಾಗಿ ಇರಾನ್ ಸರ್ಕಾರ ಅಧಿಕೃತವಾಗಿ ತಿಳಿಸಿದೆ. ಸಂಘರ್ಷಕ್ಕೆ ತಕ್ಷಣವೇ ಪೂರ್ಣವಿರಾಮ ಇಡುವಂತೆ ಟ್ರಂಪ್ ನಿರಂತರ ಒತ್ತಡ ಹೇರುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಯುದ್ಧವನ್ನು ತಕ್ಷಣ ನಿಲ್ಲಿಸದಿದ್ದರೆ ಇರಾನ್ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಅಧ್ಯಕ್ಷ ಟ್ರಂಪ್ ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಶಾಂತಿ ಸ್ಥಾಪನೆಗೆ ಅಮೆರಿಕ ಕೆಲವು ಹೊಸ ಷರತ್ತುಗಳನ್ನು ಒಳಗೊಂಡ ಪ್ರಸ್ತಾವನೆಯನ್ನು ಇರಾನ್ ಮುಂದಿಟ್ಟಿದೆ.
ಅಮೆರಿಕದ ಈ ಪ್ರಸ್ತಾವನೆಯನ್ನು ಚರ್ಚಿಸಲು ಇರಾನ್ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ತುರ್ತು ಸಭೆ ನಡೆಸಿದೆ. “ನಮ್ಮ ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆಯಾಗದ ಮಾರ್ಗಗಳನ್ನು ನಾವು ಹುಡುಕುತ್ತಿದ್ದೇವೆ” ಎಂದು ಇರಾನ್ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಅಮೆರಿಕವು ಇಸ್ರೇಲ್ ಮತ್ತು ಇರಾನ್ ನಡುವೆ ನೇರ ಸಂಘರ್ಷವನ್ನು ತಡೆಯಲು ರಷ್ಯಾದಂತಹ ರಾಷ್ಟ್ರಗಳ ಮೂಲಕವೂ ಸಂಧಾನದ ಪ್ರಯತ್ನ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಆರ್ಥಿಕ ದಿಗ್ಬಂಧನಗಳ ಸಡಿಲಿಕೆ ಮತ್ತು ಸುರಕ್ಷಿತ ಕಾರಿಡಾರ್ ನಿರ್ಮಾಣದ ಭರವಸೆಯನ್ನು ಈ ಪ್ರಸ್ತಾವನೆಯಲ್ಲಿ ನೀಡಲಾಗಿದೆ ಎನ್ನಲಾಗಿದೆ.
ಇರಾನ್ ಮತ್ತು ಅಮೆರಿಕ ನಡುವಿನ ಈ ಮಾತುಕತೆಯ ಮುನ್ಸೂಚನೆ ಸಿಗುತ್ತಿದ್ದಂತೆಯೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡುಬಂದಿದೆ.








