ವಿಧಿವಿಜ್ಞಾನ ಪರೀಕ್ಷೆಯ ವರದಿಯಲ್ಲಿ ಸಂತ್ರಸ್ತರ ದೇಹದಲ್ಲಿ ಮತ್ತು ಅವರು ಸೇವಿಸಿದ್ದ ಹಣ್ಣಿನ ಮಾದರಿಗಳಲ್ಲಿ ಇಲಿಗಳನ್ನು ಕೊಲ್ಲಲು ಬಳಸುವ ತೀವ್ರ ವಿಷಕಾರಿ ಅಂಶ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಯ ವೇಳೆ ಅವರ ಆಂತರಿಕ ಅಂಗಗಳು ಹಸಿರು ಬಣ್ಣಕ್ಕೆ ತಿರುಗಿದ್ದು ಪತ್ತೆಯಾಗಿತ್ತು, ಇದು ವಿಷಪ್ರಾಶನವಾದಾಗ ಕಂಡುಬರುವ ಲಕ್ಷಣವಾಗಿದೆ. ಈ ಬೆಳವಣಿಗೆಯಿಂದ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ.
ಅಬ್ದುಲ್ಲಾ ಡೊಕಾಡಿಯಾ (45), ಅವರ ಪತ್ನಿ ನಸ್ರೀನ್ (35), ಮತ್ತು ಮಕ್ಕಳಾದ ಝೈನಾಬ್ (13) ಹಾಗೂ ಆಯೇಷಾ (16) ತಮ್ಮ ಮುಂಬೈ ಮನೆಯಲ್ಲಿ ಸಂಬಂಧಿಕರಿಗಾಗಿ ಔತಣಕೂಟ ಏರ್ಪಡಿಸಿ ‘ಮಟನ್ ಪುಲಾವ್’ ಬಡಿಸಿದ್ದರು. ಸಂಬಂಧಿಕರು ಹೋದ ನಂತರ, ಅಂದರೆ ಸುಮಾರು ಮಧ್ಯರಾತ್ರಿ 1 ಗಂಟೆಗೆ ಕುಟುಂಬದವರು ಕಲ್ಲಂಗಡಿ ಹಣ್ಣನ್ನು ಸೇವಿಸಿದ್ದರು. ಮುಂಜಾನೆ 5 ಗಂಟೆಯ ಸುಮಾರಿಗೆ ಎಲ್ಲರಿಗೂ ತೀವ್ರ ವಾಂತಿ ಮತ್ತು ಭೇದಿ ಆರಂಭವಾಗಿದ್ದು, ಕೆಲವೇ ಗಂಟೆಗಳಲ್ಲಿ ನಾಲ್ವರೂ ಸಾವನ್ನಪ್ಪಿದ್ದರು.
ಈ ನಾಲ್ವರ ಸಾವಿಗೆ ‘ಲಿಥಾಲ್ ರೊಡೆಂಟಿಸೈಡ್’ (Lethal Rodenticide) ಎಂಬ ಪ್ರಾಣಾಂತಿಕ ವಿಷ ಕಾರಣ ಎಂದು ಪರೀಕ್ಷೆಗಳು ಬಹಿರಂಗಪಡಿಸಿವೆ.ವೈದ್ಯರು ಸಂತ್ರಸ್ತರ ದೇಹದಲ್ಲಿ ಇಲಿ ವಿಷದಲ್ಲಿ ಬಳಸುವ ‘ಜಿಂಕ್ ಫಾಸ್ಫೈಟ್’ (Zinc Phosphite) ಎಂಬ ವಿಷಕಾರಿ ರಾಸಾಯನಿಕದ ಕುರುಹುಗಳನ್ನು ಪತ್ತೆಹಚ್ಚಿದ್ದಾರೆ.
ಕುಟುಂಬದವರು ಸೇವಿಸಿದ್ದ ಕಲ್ಲಂಗಡಿ ಹಣ್ಣಿನ ಮಾದರಿಗಳಲ್ಲೂ ಇದೇ ಜಿಂಕ್ ಫಾಸ್ಫೈಟ್ ಅಂಶ ಪತ್ತೆಯಾಗಿದೆ.
ಈ ರಾಸಾಯನಿಕವು ಆಕಸ್ಮಿಕವಾಗಿ ಹಣ್ಣನ್ನು ಸೇರಿತ್ತೇ ಅಥವಾ ಯಾರಾದರೂ ಉದ್ದೇಶಪೂರ್ವಕವಾಗಿ ಹಣ್ಣಿನೊಳಗೆ ವಿಷವನ್ನು ಇಂಜೆಕ್ಟ್ ಮಾಡಿದ್ದಾರೆಯೇ ಎಂಬ ಬಗ್ಗೆ ತನಿಖಾಧಿಕಾರಿಗಳು ಈಗ ತನಿಖೆ ನಡೆಸುತ್ತಿದ್ದಾರೆ.








