ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಮಾಲ್ವೆಯಲ್ಲಿ ಹೈಬ್ರಿಡ್ ಅಕೇಶಿಯಾ ಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡಿ ಸಾಗಿಸಿದಂತ ಆರೋಪವನ್ನು ಗ್ರಾಮಸ್ಥರು ಮಾಡಿದ್ದರು. ಈ ಸಂಬಂಧ ಸ್ಥಳಕ್ಕೆ ಸಾಗರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಡಿ ಫಯಾಜುದ್ದೀನ್ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೇ ಈ ಘಟನೆ ಸಂಬಂಧ 9 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಇಂದು ಕನ್ನಡ ನ್ಯೂಸ್ ನೌ ಜೊತೆಗೆ ಈ ಮಾಹಿತಿ ಹಂಚಿಕೊಂಡಂತ ಅವರು, ಸಾಗರ ತಾಲ್ಲೂಕಿನ ಕಸಬಾ ಹೋಬಳಿಯ ಮಾಲ್ವೆ ಗ್ರಾಮದಲ್ಲಿ ಸಾಮಾಜಿಕ ಅರಣ್ಯದಲ್ಲಿ ಅಕ್ರಮವಾಗಿ ಹೈಬ್ರಿಡ್ ಅಕೇಶಿಯಾ ಮರ ಕಡಿತಲೆ ಘಟನೆ ಕಂಡು ಬಂದಿತ್ತು. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಸುಮಾರು 42 ಮರಗಳನ್ನು ಕಡಿತಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಸಂಬಂಧ 9 ಮಂದಿ ವಿರುದ್ಧ ನ್ಯಾಯಾಲಯದ ಅನುಮತಿಯನ್ನು ಪಡೆದು ಎಫ್ಐಆರ್ ದಾಖಲಿಸುವುದಾಗಿ ಹೇಳಿದರು.
ಹೈಬ್ರಿಡ್ ಅಕೇಶಿಯಾ ಮರಗಳನ್ನು ನಾನು ನೆಟ್ಟು ಬೆಳಸಿದ್ದಾಗಿ ಪಕ್ಕದ ಜಮೀನಿನ ಮಾಲೀಕರು ತಿಳಿಸಿದ್ದಾರೆ. ನಮ್ಮ ಜಮೀನಿನ ವ್ಯಾಪ್ತಿಯಲ್ಲಿ ಇರುವುದಾಗಿಯೂ ವಾದಿಸಿದ್ದಾರೆ. ಹೀಗಾಗಿ ಸಂಬಂಧ ಪಟ್ಟ ಜಮೀನಿನ ದಾಖಲೆಗಳನ್ನು ಒದಗಿಸಲು ಇಲಾಖೆಯಿಂದ ನೋಟಿಸ್ ನೀಡಲಾಗಿದೆ. ಅವರು ನೀಡುವಂತ ದಾಖಲೆಯನ್ನು ಪರಿಶೀಲಿಸಿ ಮುಂದಿನ ಕ್ರಮ ವಹಿಸೋದಾಗಿ ತಿಳಿಸಿದರು.
ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳ ಲೋಪದ ಬಗ್ಗೆ ಆಂತರಿಕ ತನಿಖಾಧಿಕಾರಿ ನೇಮಕ ಮಾಡಲಾಗಿದೆ. ಮಾಲ್ವೆಯಲ್ಲಿ ಹೈಬ್ರಿಡ್ ಅಕೇಶಿಯಾ ಮರಗಳನ್ನು ಅನುಮತಿ ಪಡೆಯದೇ ಅಕ್ರಮವಾಗಿ ಕಡಿತಲೆ ಮಾಡಿರೋ ಆರೋಪದಲ್ಲಿ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದಾರಾ ಎನ್ನುವ ಸಂಬಂಧ ತನಿಖೆ ನಡೆಸಲಿದ್ದಾರೆ. ಮೂರು ದಿನಗಳಲ್ಲಿ ತನಿಖಾ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ. ಆ ವರದಿಯನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಳೆದ ಸೋಮವಾರದಂದು ಈ ಘಟನೆ ನಡೆದಿದೆ. ಮಂಗಳವಾರದಂದು ಮಾಲ್ವೆ ಗ್ರಾಮಸ್ಥರು ಮರಗಳನ್ನು ಕಡಿತಲೆ ಬಗ್ಗೆ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಕೂಡಲೇ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಗರುಡಾಕ್ಷಿ ಮೂಲಕ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ. ಯಾರೇ ಶಾಮೀಲಾಗಿದ್ದರೂ ಮುಲಾಜಿಲ್ಲದೇ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದರು.
ಈಗಾಗಲೇ ಕಡಿತಲೆ ಮಾಡಿ ಹೈಬ್ರಿಡ್ ಅಕೇಶಿಯಾ ಮರ ಕಡಿತಲೆ ಮಾಡಿ ಸಾಗಿಸಿದ ನಾಟಾ ವಶ ಪಡಿಸಿಕೊಳ್ಳಲು ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎನ್ನುವ ಪ್ರಶ್ನೆಗೆ ಉತ್ತರಿಸಿದಂತ ಡಿಎಫ್ಓ, ಸಾಗರ-ಸೊರಬ ವ್ಯಾಪ್ತಿಯ ಶಾಮಿಲ್ ಮಾಲೀಕರು ಅನುಮತಿ ಪತ್ರವಿಲ್ಲದ ನಾಟಾವನ್ನು ಪಡೆಯುವಂತಿಲ್ಲ. ಈಗಾಗಲೇ ಮಾಲ್ವೆಯ ನಾಟಾ ಸಾಗಾಟದ ಬಗ್ಗೆ ತಂಡವನ್ನು ರಚಿಸಿದ್ದು, ಆ ತಂಡವು ಸಾಗರ, ಸೊರಬ ವ್ಯಾಪ್ತಿಯ ಟಿಂಬರ್ ಗಳಿಗೆ ಭೇಟಿ ನೀಡಿ ಹೊಸದಾಗಿ ಪಡೆದಿರುವಂತ ನಾಟಾ ಬಗ್ಗೆಯೂ ಪರಿಶೀಲಿಸಿ ಮಾಹಿತಿ ನೀಡಲಿದೆ ಎಂದರು.
ಒಟ್ಟಾರೆಯಾಗಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಮಾಲ್ವೆಯಲ್ಲಿ ಸಾಮಾಜಿಕ ಅರಣ್ಯದಲ್ಲಿ ನೆಟ್ಟಂತ ನೆಡು ತೋಪಿನ ಹೈಬ್ರಿಡ್ ಅಕೇಶಿಯಾ ಮರವನ್ನು ಅಕ್ರಮವಾಗಿ ಅನುಮತಿ ಇಲ್ಲದೇ ಕಡಿತಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳೋದಾಗಿ ಸಾಗರ ಡಿಎಫ್ಓ ಎಂ.ಡಿ ಫಯಾಜುದ್ದೀನ್ ತಿಳಿಸಿದ್ದಾರೆ. ಆ ನಿಟ್ಟಿನಲ್ಲಿ ಯಾವೆಲ್ಲ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…
ನನ್ನ ಶಾಸಕತ್ವ ಹೋದರೂ ಚಿಂತೆಯಿಲ್ಲ, ಬೇಸೂರಲ್ಲಿ ಅಣು ಸ್ಥಾವರಕ್ಕೆ ಬಿಡುವುದಿಲ್ಲ: ಸರ್ಕಾರಕ್ಕೆ ಬೇಳೂರು ಸವಾಲ್!
ಪಕ್ಷಭೇದ ಮರೆತ ನಾಯಕರು: ಸಾಗರದ ಬೇಸೂರಲ್ಲಿ ಅಣು ಸ್ಥಾವರ ವಿರೋಧಿಸಿ ಒಂದಾದ ಬೇಳೂರು – ಹಾಲಪ್ಪ!








