ಚೆನ್ನೈ:ತಮಿಳುನಾಡು ವಿಧಾನಸಭೆ ಚುನಾವಣೆಯ ನಂತರ ಸರ್ಕಾರ ರಚನೆಯ ವಿಚಾರದಲ್ಲಿ ಉಂಟಾಗಿರುವ ಬಿಕ್ಕಟ್ಟು ಈಗ ಮೈತ್ರಿಕೂಟಗಳ ಒಡಕಿಗೆ ಕಾರಣವಾಗಿದೆ. ನಟ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷಕ್ಕೆ ಬೆಂಬಲ ನೀಡಲು ಮುಂದಾಗಿರುವ ಕಾಂಗ್ರೆಸ್ ವಿರುದ್ಧ ಡಿಎಂಕೆ (DMK) ಗುರುವಾರ ಅಧಿಕೃತವಾಗಿ ಖಂಡನಾ ನಿರ್ಣಯವನ್ನು ಅಂಗೀಕರಿಸಿದೆ. ಈ ಬೆಳವಣಿಗೆಯು ದಶಕಗಳ ಕಾಲದ ಡಿಎಂಕೆ-ಕಾಂಗ್ರೆಸ್ ಮೈತ್ರಿಯು ಅಂತ್ಯಗೊಳ್ಳುವ ಮುನ್ಸೂಚನೆ ನೀಡಿದೆ.
ಎಂ.ಕೆ. ಸ್ಟಾಲಿನ್ ನೇತೃತ್ವದಲ್ಲಿ ನಡೆದ ಡಿಎಂಕೆ ಹಿರಿಯ ನಾಯಕರ ಸಭೆಯಲ್ಲಿ ಕಾಂಗ್ರೆಸ್ ನಡೆಯನ್ನು ತೀವ್ರವಾಗಿ ಟೀಕಿಸಲಾಗಿದೆ. “ಸಂಕಷ್ಟದ ಸಮಯದಲ್ಲಿ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ” ಎಂದು ಡಿಎಂಕೆ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳನ್ನು ಅಧಿಕಾರದಿಂದ ದೂರವಿಡಲು ಪಣತೊಟ್ಟಿರುವ ವಿಜಯ್ ಅವರ ‘ಟಿವಿಕೆ’ ಪಕ್ಷಕ್ಕೆ ಕಾಂಗ್ರೆಸ್ ಬೆಂಬಲ ಘೋಷಿಸಿರುವುದು ಡಿಎಂಕೆ ಕಣ್ಣು ಕೆಂಪಾಗಿಸಿದೆ. ಇದರಿಂದಾಗಿ ಡಿಎಂಕೆಯು ತನ್ನ ಪ್ರಮುಖ ಮಿತ್ರಪಕ್ಷವಾದ ಕಾಂಗ್ರೆಸ್ ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳುವ ನಿರ್ಣಯಕ್ಕೆ ಬಂದಿದೆ.
“ಬಿಜೆಪಿ ಅಥವಾ ವಿಜಯ್ ಅಂತಹ ಶಕ್ತಿಗಳ ವಿರುದ್ಧ ಹೋರಾಡುವ ಬದಲು, ಅಧಿಕಾರದ ಆಸೆಗೆ ಬಿದ್ದು ಜನಾದೇಶಕ್ಕೆ ದ್ರೋಹ ಬಗೆಯುತ್ತಿರುವ ಕಾಂಗ್ರೆಸ್ ಕ್ರಮವನ್ನು ನಾವು ಬಲವಾಗಿ ಖಂಡಿಸುತ್ತೇವೆ” ಎಂದು ಡಿಎಂಕೆ ತನ್ನ ನಿರ್ಣಯದಲ್ಲಿ ತಿಳಿಸಿದೆ.
ಈ ಬೆಳವಣಿಗೆಯಿಂದಾಗಿ ಇಂಡಿಯಾ (INDIA) ಮೈತ್ರಿಕೂಟಕ್ಕೂ ತಮಿಳುನಾಡಿನಲ್ಲಿ ಧಕ್ಕೆಯುಂಟಾಗಿದೆ. ವಿಜಯ್ ಅವರ ಸರ್ಕಾರ ರಚನೆಗೆ ಕಾಂಗ್ರೆಸ್‌ನ 5 ಶಾಸಕರು ಅನಿವಾರ್ಯವಾಗಿದ್ದು, ಇದೇ ಈಗ ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ಜಗಳಕ್ಕೆ ಮೂಲವಾಗಿದೆ.
ಕಳೆದ ಹಲವು ಚುನಾವಣೆಗಳಲ್ಲಿ ಡಿಎಂಕೆ ಮತ್ತು ಕಾಂಗ್ರೆಸ್ ಒಟ್ಟಾಗಿ ಸ್ಪರ್ಧಿಸಿದ್ದವು. ಆದರೆ ಈಗಿನ ಫಲಿತಾಂಶದ ನಂತರ ಕಾಂಗ್ರೆಸ್ ತನ್ನ ಹಾದಿಯನ್ನು ಬದಲಿಸಿರುವುದು ತಮಿಳುನಾಡು ರಾಜಕೀಯದಲ್ಲಿ ಹೊಸ ಮೈತ್ರಿ ಸಮೀಕರಣಗಳಿಗೆ ದಾರಿ ಮಾಡಿಕೊಟ್ಟಿದೆ.








